ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು. ಬರೊಬ್ಬರಿ 20 ವರ್ಷಗಳ ಬಳಿಕ ಒಕ್ಕಲಿಗ ಸಮುದಾಯದ ನಾಯಕನಿಗೆ ರಾಜ್ಯ ಕಾಂಗ್ರೆಸ್ ಸಾರಥ್ಯ ನೀಡಿರುವುದು ಹಳೇ ಮೈಸೂರು ಭಾಗದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷಪಟ್ಟ ನೀಡಿರುವುದಿಂದ ರಾಮನಗರ, ಮೈಸೂರು-ಮಂಡ್ಯ- ಹಾಸನ ಸೇರಿದಂತೆ ಹಳೆ ಮೈಸೂರು ಭಾಗದ ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಪಕ್ಷ ಸಂಘಟನೆ ಕೆಲಸಕ್ಕೆ ಹಿನ್ನಡೆಯಾಗಲಿದೆ ಎಂದು ರಾಜ್ಯ ರಾಜಕೀಯ ವಠಾರದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿ ನಾಯಕರ ಲೆಕ್ಕಾಚಾರ ಉಲ್ಟಾ!?
ಸದ್ಯ ರಾಮನಗರ, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದೇ ಅಬ್ಬರ. ಇಲ್ಲಿ ಈ ಎರಡು ಪಕ್ಷದ ಪಾರುಪತ್ಯಕ್ಕೆ ಬ್ರೇಕ್ ಹಾಕುವವರೇ ಇಲ್ಲ ಎನ್ನಲಾಗಿತ್ತು. ಆದ್ರೆ ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಳೆ ಮೈಸೂರು ಭಾಗದಲ್ಲಿ ತನ್ನ ಪತಾಕೆಯನ್ನು ಹಾರಿಸಿತು. ಇದೇ ಹುಮ್ಮಸ್ಸಿನಲ್ಲಿ ಈ ನಾಲ್ಕು ಜಿಲ್ಲೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದ ಬಿಜೆಪಿಗೆ ಇದೀಗ ಡಿಕೆಶಿ ಅಡ್ಡಿಯಾಗಿದ್ದಾರೆ. ಒಕ್ಕಲಿಗರೇ ಹೆಚ್ಚಿರುವ ಈ ಪ್ರಾಂತ್ಯಗಳಲ್ಲಿ ಟ್ರಬಲ್ ಶೂಟರ್
ಬೆಂಬಲಿಗರ ಸಂಖ್ಯೆ ಹೆಚ್ಚಿದೆ. ಇನ್ಮುಂದೆ ಡಿ.ಕೆ ಶಿವಕುಮಾರ್ ಅವರೇ ಕಾಂಗ್ರೆಸ್ ನ ಮುಂದಾಳತ್ವ ವಹಿಸುವುದರಿಂದ ವಕ್ಕಲಿಗ ನಾಯಕರು ಡಿಕೆ ಸಾಹೇಬನಿಗೆ ಬಹುಪರಾಕ್ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಡಿಕೆಶಿಗೆ ಟಕ್ಕರ್ ಕೊಡುವ ನಾಯಕರಿಲ್ಲ!
ಹೌದು..! ಹಳೇ ಮೈಸೂರು ಭಾಗ ಮತ್ತು ರಾಮನಗರದ ಮಟ್ಟಿಗೆ ಕನಕಪುರ ಬಂಡೆಗೆ ಟಕ್ಕರ್ ಕೊಡುವ ನಾಯಕರು ಬಿಜೆಪಿಯಲ್ಲಿಲ್ಲ. ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಬಿಜೆಪಿಯನ್ನು ರಾಮನಗರ ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರಿಸುವ ಕನಸು ಕಂಡಿದ್ದರು. ಆದರೆ, ಇದೀಗ ಬಿಜೆಪಿಯಲ್ಲೇ ಸಿ.ಪಿ. ಯೋಗೇಶ್ವರ್ ಮೂಲೆ ಗುಂಪಾಗಿರುವುದು ಮತ್ತು ಡಿಕೆಶಿ ಅವರಿಗೆ ಪಕ್ಷದಲ್ಲಿ ಪ್ರಬಲ ಸ್ಥಾನ ನೀಡಿರುವುದು ಈ ನಾಲ್ಕೂ ಜಿಲ್ಲೆಗಳಲ್ಲಿ ಮತ್ತೆ ಕಾಂಗ್ರೆಸ್ ಏಳಿಗೆಗೆ ಕಾರಣವಾಗಲಿದೆ.








