ಶಾಲೆಯಲ್ಲಿ ಮೊಟ್ಟೆ ವಿತರಣೆ ವಿರೋಧಿಸಿ ಮಗು ಟಿ ಸಿ ಪಡೆದ ತಂದೆ
ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆ ವಿತರಣೆಯ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ, ಮೊಟ್ಟೆ ವಿತರಣೆ ಬಗ್ಗೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯಗಳನ್ನ ಮುಂದಿಡುತ್ತಿದ್ದಾರೆ. ಅಲ್ಲಿಲ್ಲಿ ಪರ – ವಿರೋಧ ಕುರಿತು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ನಡುವೆ ಕೊಪ್ಪಳ ಜಿಲ್ಲೆಯಲಿ ಪೋಷಕರೊಬ್ಬರು ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಬೇಸರಗೊಂಡು ತಮ್ಮ ಮಗುವನ್ನ ಸರ್ಕಾರಿ ಶಾಲೆ ಬಿಡಿಸಿ ಖಾಸಗಿ ಶಾಲೆಯಲ್ಲಿ ಸೇರಿಸಿರುವ ಘಟನೆ ನಡೆದಿದೆ. ವೀರಣ್ಣ ಕೋರ್ಲಹಳ್ಳಿ ಎನ್ನುವವರು ಅಖಿಲ ಭಾರತ ಲಿಂಗಾಯತ್ ಮಹಾಸಭಾ ರಾಜ್ಯಾಧ್ಯಕ್ಷರಾಗಿದ್ದು, ತಮ್ಮ ಪುತ್ರನನ್ನು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೆಯ ತರಗತಿ ಸೇರಿಸಿದ್ದರು. ಇದೀಗ ಸರ್ಕಾರದ ನಿರ್ಣಯ ಖಂಡಿಸಿ ಮಗನ ವರ್ಗಾವಣೆ ಪ್ರಮಾಣ ಪತ್ರ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ.
ಈ ಕುರಿತು ವೀರಣ್ಣ ಕೊರ್ಲಹಳ್ಳಿ ಎಂಬುವವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ನಾನು ಕನ್ನಡದ ಮೇಲೆ ಅಭಿಮಾನದಿಂದ ಸರ್ಕಾರಿ ಶಾಲೆಗೆ ಸೇರಿಸಿದ್ದೆ ಆದರೆ ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ಕೊಡುವ ನಿರ್ಧಾರವನ್ನ ಖಂಡಿಸಿ ನನ್ನ ಮಗನ ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗೆ ಸೇರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ ಕಂಡುಬಂದಿದೆ. 14 ಲಕ್ಷಕ್ಕೂ ಹೆಚ್ಚು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಲು ಸರ್ಕಾರ ನಿರ್ಧರಿಸಿತ್ತು.