ಸಿನಿಮಾ ಆಗಲಿದೆ ಕಾಮೇಗೌಡರ ಸಾಧನೆ..!

ಬೆಂಗಳೂರು : ಕಾಮೇಗೌಡ, ಇವರ ಸಾಧನೆ ಎಂಥವರಿಗೂ ಮೈ ಜುಮ್ ಎನಿಸುವಂಥದ್ದು. ತಮ್ಮ ಸ್ವಾರ್ಥಕ್ಕಾಗಿ ಮರ, ಗಿಡಗಳನ್ನು ಕಡಿದು ಭೂಮಿ ಬರುಡಾಗಿಸುತ್ತಿರುವವರ ಮಧ್ಯೆ ಕಾಮೇಗೌಡರ ಕೆಲಸ ಇಂದಿನ ಯುವ ಪೀಳಿಗೆಗೆ ಮಾದರಿ. ಕೆರೆ ತೋಡುವ ಅವರ ಆಸಕ್ತಿ ಅಗಾಧವಾದದ್ದು ಎಂಬುದು ಈಗಾಗಲೇ ತಿಳಿದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮನ್ ಕೀ ಬಾತ್ ನಲ್ಲಿ 80ರ ಇಳಿ ವಯಸ್ಸಿನ ಕಾಮೇಗೌಡರ ಸಾಧನೆಯನ್ನು ಕೊಂಡಾಡಿದ್ದಾರೆ. ಇವರ ಜೀವನವನ್ನು ಪ್ರತಿಯೊಬ್ಬ ಯುವಕರು ಅರಿಯಬೇಕು. ಹೀಗಾಗಿ ಅವರ ಸಾಧನೆಯನ್ನು ತೆರೆ ಮೇಲೆ ತರಲು ಬರಹಗಾರ, ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್ ನಿರ್ಧರಿಸಿದ್ದಾರೆ.

ಈಗಾಗಲೇ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕಾಮೇಗೌಡರ ಜೀವನಾಧಾರಿತ ಡಾಕ್ಯೂಮೆಂಟ್ರಿ ಸಿದ್ಧಪಡಿಸಲು ತಯಾರಿ ನಡೆದಿದ್ದು, ಸಿನಿಮಾದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಕುರಿತು ದಯಾಳ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಎಫ್ ಬಿ ಪೋಸ್ಟ್ ನಲ್ಲಿ ಪೋಸ್ಟರ್ ನ ಫೋಟೋ ಹಾಕಿ ಶ್ರೀ ಕಾಮೇಗೌಡ ಅವರ ಸಾಧನೆಯ ಡಾಕ್ಯೂಮೆಂಟ್ರಿ ನಿರ್ಮಾಣ ಮಾಡುತ್ತಿರುವುದಕ್ಕೆ ಡಿ ಪಿಕ್ಚರ್ಸ್ ಹಾಗೂ ಓಂ ಪ್ರೊಡಕ್ಷನ್ಸ್ ಹೌಸ್ ಹೆಮ್ಮೆ ಹಾಗೂ ಸಂತಸ ಪಡುತ್ತದೆ. ಇದನ್ನು ನಾನೇ ನಿರ್ದೇಶಿಸುತ್ತಿದ್ದೇನೆ. ಕಾಮೇಗೌಡರ ಸಾಧನೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ಇದಾಗಿದೆ. ಚಿಯರ್ಸ್ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಸಿನಿಮಾಗೆ ದಿ ಗುಡ್ ಶಫರ್ಡ್ ಎಂಬ ಟೈಟಲ್ ಇಟ್ಟಿದ್ದಾರೆ. ದಯಾಳ್ ಪದ್ಮನಾಭ್ ಅವರ ಪೋಸ್ಟರ್ ಗೆ ಹಲವರು ಕಮೆಂಟ್ ಮಾಡಿದ್ದು, ಉತ್ತಮ ಪ್ರಾಜೆಕ್ಟ್ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This