ಚಿಕ್ಕೋಡಿ: ಕಳ್ಳರೆಂದು ತಿಳಿದು ಮೂವರನ್ನು ಥಳಿಸಿರುವ ಘಟನೆ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ.
ಮೂವರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಸಾರ್ವಜನಿಕವಾಗಿ ಹಲ್ಲೆ ಮಾಡಲಾಗಿದೆ. ನಾಲ್ವರು ಯುವಕರು ಈ ಗ್ರಾಮಕ್ಕೆ ಬೆಳಿಗ್ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಗ್ರಾಮಸ್ಥರು ವಿಚಾರಿಸಿದ್ದಾರೆ. ಆಗ ಅಲ್ಲಿಂದ ಓರ್ವ ವ್ಯಕ್ತಿ ಪರಾರಿಯಾಗಿದ್ದಾನೆ. ಕೂಡಲೇ ಗ್ರಾಮಸ್ಥರು ಕಳ್ಳರೆಂದು ಭಾವಿಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಟ್ಟಿಗೆಯಿಂದ ಹೊಡೆದು, ಮುಖಕ್ಕೆ ಒದ್ದು ಮನಬಂದಂತೆ ಥಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರು ಯುವಕರ ರಕ್ಷಣೆ ಮಾಡಿದ್ದಾರೆ. ಸದ್ಯ ಮೂವರು ಯುವಕರನ್ನು ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದವರು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದವರೆಂದು ತಿಳಿದಿದ್ದು, ಈ ಕುರಿತು ಗ್ರಾಮಸ್ಥರ ಮೇಲೆ ಯುವಕರು ದೂರು ನೀಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ