ಧಾರವಾಡ : ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಚೀನಾ ಮತ್ತು ಭಾರತದ ನಡುವೆ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಚಾರವಾಗಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು, ಚೀನಾದ ಉದ್ಧಟತನದಿಂದ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ನಮ್ಮ ಯೋಧರು 20ಕ್ಕೆ ಡಬಲ್ 43 ಜನರನ್ನು ಹೊಡೆದು ಚೀನಾಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಶ್ರೀರಾಮ ಸೇನೆ ಹಾಗೂ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ತೂಪದ ಬಳಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಇದು ಕಾಂಗ್ರೆಸ್, ನೆಹರು, ರಾಹುಲ್ ಸರ್ಕಾರ ಅಲ್ಲ, ನರೇಂದ್ರ ಮೋದಿಯ 56 ಇಂಚಿನ ಛಾತಿ ಇರುವ ಸರ್ಕಾರ. ಚೀನಾ ಏನಾದರೂ ಉದ್ಧಟತನ ತೋರಿಸಿದರೆ ಸುಮ್ಮನೆ ಬಿಡುವುದಿಲ್ಲ. ಗಡಿ ದಾಟಿ ಬರುವ ಪ್ರಯತ್ನ ಮಾಡಿದರೆ ಸೈನಿಕರು ತಕ್ಕ ಉತ್ತರ ಕೊಡುತ್ತಾರೆ. ಕೇಂದ್ರ ಸರ್ಕಾರ ಮತ್ತು ಸೇನೆ ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕಾರ್ಗಿಲ್ ಸ್ತೂಪದ ಬಳಿ ಕರವೇ, ಶ್ರೀರಾಮ ಸೇನೆ, ವಿಎಚ್‌ಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಚೀನಾ ಅಧ್ಯಕ್ಷನ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತ ಪಡಿಸಿದರು. ಚೀನಾ ವಿರುದ್ಧ ಘೋಷಣೆ ಕೂಗಿದರು.








