ಇದು ರಾಮ ಮಂದಿರ... ಹಿಂದೂಗಳ ಹೃದಯ ಮಂದಿರ..
ಅಯೋಧ್ಯೆ, ಅಗಸ್ಟ್ 4: ಕೊನೆಗೂ ಕಾತುರದಿಂದ ಕಾಯುತ್ತಿದ್ದ ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆಯ ದಿನವು ಬಂದೇ ಬಿಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಮಂದಿರದ ನಿರ್ಮಾಣ ಕಾರ್ಯ ಆರಂಭಗೊಂಡು ಭವ್ಯವಾದ ರಾಮ ಮಂದಿರ ಸರಿಸುಮಾರು ಮೂರರಿಂದ ಮೂರುವರೆ ವರ್ಷಗಳಲ್ಲಿ ತಲೆ ಎತ್ತಲಿದೆ.
ಮಂದಿರದ ಪಂಚಾಂಗವು ಅಷ್ಟ ಭುಜ ಆಕೃತಿಯನ್ನು ಹೊಂದಿದ್ದು, ಶಿಲ್ಪಿ ಚಂದ್ರಕಾಂತ್ ಸೋಮಾಪೂರ ಅವರು ನಾಗರ ಶೈಲಿಯ ವಿನ್ಯಾಸವನ್ನು ಅಳವಡಿಸಿಕೊಂಡಿದ್ದಾರೆ. ದೇಗುಲವು 235 ಅಡಿ ಅಗಲ, 360 ಅಡಿ ಉದ್ದ, 161 ಅಡಿ ಎತ್ತರವನ್ನು ಹೊಂದಿದೆ ಮತ್ತು ಪ್ರಾಂಗಣದಲ್ಲಿ ಪ್ರಾರ್ಥನಾ ಮಂದಿರ, ಸೀತಾ ಮಂದಿರ, ಲಕ್ಷ್ಮಣ ಮಂದಿರ, ಭರತ ಮಂದಿರ, ಗಣಪತಿ ಮಂದಿರ, ರಾಮ ಕಥಾ ಕುಂಜ, ವೈದಿಕ ಪಾಠ ಶಾಲಾ, ಸಂತ ನಿವಾಸ, ಯಾತ್ರಿ ನಿವಾಸ, ಮ್ಯೂಸಿಯಂ ಮತ್ತು ಕೆಫಿಟೇರಿಯಾ ಇವುಗಳನ್ನು ಹೊಂದಲಿವೆ. 2024ರ ಸಮಯದಲ್ಲಿ ಮಂದಿರ ಕಾರ್ಯ ಸಂಪೂರ್ಣವಾಗಲಿದೆ ಎಂದು ಅಂದಾಜಿಸಲಾಗಿದ್ದು, ಜಗತ್ತಿನ ಮೂರನೇ ಅತೀ ದೊಡ್ಡ ಮಂದಿರ ಸಂಕೀರ್ಣವಾಗಿ ಮೂಡಿ ಬರಲಿದೆ.
ಅಗಸ್ಟ್ 5ರಂದು ಪ್ರಧಾನಿ ಮೋದಿ ಅವರು 40 ಕಿಲೋಗ್ರಾಂ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಸ್ಥಾಪನೆ ಮಾಡಿ ಭೂಮಿ ಪೂಜೆ ಮಾಡಲಿದ್ದಾರೆ. ಭಾರತದ ಎಲ್ಲ ಪುಣ್ಯ ನದಿಗಳ ಪುಣ್ಯ ತೀರ್ಥ ಸಂಪ್ರೋಕ್ಷಣೆ ಮಾಡಿ ಧಾರ್ಮಿಕ ಕಾರ್ಯ ನಡೆಯಲಿದೆ. ದೇಶದ ಎಲ್ಲ ಪುಣ್ಯ ಕ್ಷೇತ್ರಗಳ ಮೃತ್ತಿಕೆಯನ್ನು ಸೇರಿಸಿ ಭೂಮಿ ಪೂಜೆ ನೆರವೇರಲಿದೆ. ಈ ಐತಿಹಾಸಿಕ ಘಟನೆಯನ್ನು ಜಗತ್ತಿನಾದ್ಯಂತ ಕಣ್ತುಂಬಿಕೊಳ್ಳಲು ನೂರಾರು ದೇಶಗಳು ತಮ್ಮ ವಾಹಿನಿಗಳ ಮೂಲಕ ನೇರ ಪ್ರಸಾರ ಮಾಡಲಿವೆ. ಈ ಐತಿಹಾಸಿಕ ಕ್ಷಣಕ್ಕಾಗಿ ಪ್ರತೀ ಒಬ್ಬ ಹಿಂದೂ ಬಾಂಧವರ ಹೃತ್ ಮನಗಳು ಕಾತುರದಿಂದ ಕಾಯುತ್ತಿವೆ.