ಭೂಮಿಯೆ ಮೇಲಿರುವ ಸಮಸ್ತ ಜೀವಭಂಡಾರಕ್ಕೂ ವಿಶ್ವ ಭೂದಿನದ ಶುಭಾಶಯಗಳು. ಭೂಮಿಯ ಮಹತ್ವ, ವಿಶೇಷತೆ, ವೈವಿಧ್ಯತೆ, ವಿಭಿನ್ನತೆಗಳನ್ನು ದೊಡ್ಡವರಿಗೆ, ವಿದ್ಯಾವಂತರಿಗೆ, ಪಂಡಿತರಿಗೆ, ವಿದ್ವಾಂಸರಿಗೆ ಹೇಳಿ ಪ್ರಯೋಜನವಿಲ್ಲ. ಯಾಕಂದರೆ ಅವರಿಗೆ ನಮ್ಮ ಭೂಮಿಯ ಮಾಹಿತಿ ಕೊಂಚವಾದರೂ ಗೊತ್ತು, ಗೊತ್ತಿದ್ದೇ ಭೂಮಿಯ ಮೇಲಿನ ಜೀವನಾಶ, ವಾತಾವರಣ ಮಾಲಿನ್ಯ, ಅರಣ್ಯ ನಾಶ ಮಾಡುತ್ತಾ, ನೀರಿನ ಮೂಲಗಳಿಗೆ ವಿಷವಿಕ್ಕುತ್ತಾ ರಾಕ್ಷಸರಾಗಿ ವರ್ತಿಸುತ್ತಿದ್ದಾರೆ. ಅವರಿಗೆ ತಿಳಿಹೇಳಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಪೀಳಿಗೆಯ ಮಕ್ಕಳಾದರೂ ಭೂಮಿ ಮತ್ತು ಅದರ ವಾತಾವರಣವನ್ನು ಕಾಪಾಡಲಿ ಎನ್ನುವ ಉದ್ದೇಶದಿಂದ ಮಕ್ಕಳಿಗಾಗಿ ಈ ಸಣ್ಣ ಮಾಹಿತಿಯುಕ್ತ ಲೇಖನ ಹಂಚಿಕೊಳ್ಳುತ್ತಿದ್ದೇನೆ. ಬಿಡುವು ಮಾಡಿಕೊಂಡು ಓದಿ, ನಿಮ್ಮ ಮಕ್ಕಳಿಗೆ ನಮ್ಮ ಇರುವುದೊಂದೆ ಭೂಮಿಯ ಮಹತ್ವ ತಿಳಿಸಿಕೊಡಿ. ಎಳೆವಯಸ್ಸಿನಲ್ಲಿಯೇ ಅವರಿಗೆ ಅರಿವು ಮೂಡಲಿ.
* ಸೌರವ್ಯವಸ್ಥೆಯ ಮೂರನೆಯ ಗ್ರಹವಾದ ಭೂಮಿ, ಪ್ರಚಾನಿ ಇಂಗ್ಲೀಷ್ ಮತ್ತು ಜರ್ಮನ್ ಭಾಷೆಗಳಿಂದ ಎರವಲು ಪಡೆದಿರುವ Earth ಎನ್ನುವ ಪದದ ಅರ್ಥ Ground ಅಥವಾ ಬಯಲು. ಭೂಮಂಡಲದ ಒಟ್ಟು ತೂಕ 5,974,000,000,000,000,000,000,000 ಕಿಲೋಗ್ರಾಮ. ಅಂದರೆ ಹತ್ತಿರ ಹತ್ತಿರ 6 ಸೆಪ್ಟಿಲಿಯನ್ ಕೇಜಿ. ಮಿಲಿಯನ್, ಬಿಲಿಯನ್, ಟ್ರಿಲಿಯನ್ ಗಳ ಮುಂದಿನ ಪರಿಮಾಣುಗಳಲ್ಲಿ ಈ ಸೆಪ್ಟಿಲಿಯನ್ ಸಹ ಒಂದು. [ಕ್ವಾರ್ಡ್ರಿಲಿಯನ್ (quadrillion) ಅಂದರೆ ಅಂಕಿಯ ಮುಂದೆ 15 ಸೊನ್ನೆ, ಕ್ವಿಂಟಿಲಿಯನ್ (quintillion) 18 ಸೊನ್ನೆ. ನಂತರ ಅಂಕಿಯ ಮುಂದೆ 21 ಸೊನ್ನೆಗಳ ಸೆಕ್ಸ್ಟಿಲಿಯನ್ (sextillion) ಕೊನೆಗೆ 24 ಸೊನ್ನೆಗಳ ಸೆಪ್ಟಿಲಿಯನ್ (septilion) ಬರುತ್ತದೆ]
* ಸೌರಮಂಡಲದ 5ನೇ ದೊಡ್ಡ ಗ್ರಹವಾದ ಭೂ ಪರಿದಿಯ ಒಟ್ಟು ಸುತ್ತಳತೆ (ಭೂಮಧ್ಯೆ ರೇಖೆಯಿಂದ ಅಳತೆ ಮಾಡುವಂತೆ) 12800 ಕಿಲೋಮೀಟರ್. ನಮ್ಮ ಸೌರ ವ್ಯವಸ್ಥೆಯ ದೊಡ್ಡ ಗ್ರಹಗಳ ಪಟ್ಟಿಯಲ್ಲಿ ಕ್ರಮವಾಗಿ ಗುರು, ಶನಿ, ಯುರೇನಸ್, ನೆಫ್ಚೂನ್ ಗ್ರಹಗಳು ಮೊದಲ ನಾಲ್ಕು ಸ್ಥಾನಗಳಲ್ಲಿವೆ.
* ನಮ್ಮ ಸೌರಮಂಡಲದಲ್ಲಿ ಭೂಮಿಯಲ್ಲಿ ಮಾತ್ರ ಜೀವಿಗಳ ವಾಸವನ್ನು ಅಸ್ಥಿತ್ವವನ್ನು ಗುರುತಿಸಲಾಗಿದೆ. ಇದಕ್ಕೆ ಖಗೊಳ ವಿಜ್ಞಾನಿಗಳು ನೀಡಿರುವ ಕಾರಣವೇನೆಂದರೆ, ಇಲ್ಲಿರುವ ಆಮ್ಲಜನಕದ ಪ್ರಮಾಣ, ನೀರಿನ ಪ್ರಮಾಣ ಮತ್ತು ಸೂರ್ಯನಿಂದ ಇರುವ ಅಂತರ. ಸೂರ್ಯನಿಗೆ ಹತ್ತಿರವಿದ್ದರೆ ಶಾಖ ಹೆಚ್ಚು, ತೀರಾ ದೂರವಿದ್ದರೆ ಶೀತ ಹೆಚ್ಚು. ಈ ಎರಡೂ ಸ್ಥಿತಿಗಳು ಜೀವಿಗಳ ಅಸ್ಥಿತ್ವಕ್ಕೆ ಯೋಗ್ಯವಲ್ಲ. ಆ ನಿಟ್ಟಿನಲ್ಲಿ ಭೂಮಿಯ ಸಮಾನಾಂತರ ದೂರ ಜೀವಿಗಳ ಉಗಮ ಮತ್ತು ಬದುಕಿಗೆ ಕಾರಣವಾಗಿದೆ. ಭೂಮಿಯ ವಾತಾವರಣವೂ ಜೀವಿಗಳ ಉಳಿವಿಗೆ ಪೂರಕವಾಗಿದೆ. ಇಲ್ಲಿನ ಆಮ್ಲಜನಕ ಮತ್ತು ಸಾರಜನಕದ ಸಮ್ಮಿಶ್ರ ಹೊದಿಕೆಯೂ ಸೌರಕಿರಣಗಳ ಪ್ರಭಾವ ತಡೆದು ಉಷ್ಣತೆ ನಿಯಂತ್ರಿಸುತ್ತದೆ.
* ನಮ್ಮ ಭೂಮಿಯ ಪುರಾತನ ಬಂಡಗಳನ್ನು ಆಧಾರವಾಗಿ ಸಂಶೋಧನೆ ನಡೆಸಿರುವ ಭೂವಿಜ್ಞಾನಿಗಳು ನಮ್ಮ ಭೂಮಿಯ ವಯಸ್ಸು ಸುಮಾರು 4.5 ಬಿಲಿಯನ್ ವರ್ಷಗಳು (450-460 ಕೋಟಿ ವರ್ಷಗಳು) ಎಂದು ಅಂದಾಜಿಸಿದ್ದಾರೆ. ಆದರೆ ಇನ್ನೊಂದು ಮೂಲಗಳ ವಾದಗಳ ಪ್ರಕಾರ ಭೂಮಿಯ ಮೇಲೆ ಜೀವ ಉಗಮವಾಗಿ 150-200 ಮಿಲಿಯನ್ ವರ್ಷಗಳಾಗಿವೆ.
* ಏಕಚಂದ್ರನನ್ನು ಹೊಂದಿರುವ ಭೂಮಿಯ ಮೇಲೆ ಸದ್ಯ ಬದುಕಿರುವ ಜೀವಿಗಳ ಪೈಕಿ ಅತ್ಯಂತ ಭಾರವಾದ ದೈತ್ಯಗಾತ್ರದ ಜೀವಿ ಎಂದರೆ ಅದು ನೀಲಿ ವೇಲ್ಸ್ ತಿಮಿಂಗಿಲ ಎನ್ನಬಹುದು.
* ಸೌರಮಂಡಲದ ಉಳಿದ ಗ್ರಹಗಳಂತೆ ಭೂಮಿಯೂ ಸೂರ್ಯನನ್ನು ಸುತ್ತುತ್ತದೆ. ಇದರ ಸುತ್ತುವಿಕೆಯ ವೇಗ ಸೆಕೆಂಡೊಂದಕ್ಕೆ 30 ಕಿಲೋಮೀಟರ್. ಸೂರ್ಯನನ್ನು ಒಂದು ಸುತ್ತು ಸುತ್ತಲು ಇದು 365 ದಿನಗಳನ್ನು ತೆಗೆದುಕೊಳ್ಳುತ್ತದೆ. ಕೆಲವು ವಿಜ್ಞಾನಿಗಳ ಪ್ರಕಾರ ಈ ವಾರ್ಷಿಕ ಪರಿಭ್ರಮಣೆಯ ಚಲನೆಯ ಅವಧಿ 365.2564 ದಿನಗಳು. ಹಾಗಿದ್ದರೆ ಈ 0.2654 ದಿನಗಳು ಎಲ್ಲಿ ಹೋದವು ಎಂದು ನೀವು ಕೇಳಬಹುದು. ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷ (ಲೀಪ್ ಇಯರ್) ಎಂಬುದಾಗಿ ಫೆಬ್ರವರಿ ತಿಂಗಳಿನಲ್ಲಿ 29 ದಿನಗಳು ಬರುತ್ತವಲ್ಲ, ಅಲ್ಲಿಗೆ ಈ ಹೆಚ್ಚುವರಿ ದಿನ ಸೇರ್ಪಡೆಗೊಳ್ಳುತ್ತದೆ.
* ಇನ್ನು ಭೂಮಿ ತನ್ನ ಸುತ್ತ ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ ಅವಧಿಯಾದರೂ 24 ಗಂಟೆಗಳಲ್ಲ, ಬದಲಿಗೆ 23 ಗಂಟೆ 56 ನಿಮಿಷ 4 ಸೆಕೆಂಡ್ ಎಂದು ನಿಖರ ಲೆಕ್ಕ ಕೊಟ್ಟಿದ್ದಾರೆ ಭೂವಿಜ್ಞಾನಿಗಳು.
* 23.4 ಡಿಗ್ರಿ ಆ್ಯಕ್ಸಿಸ್ ನ ಒಂದು ನೇರದಲ್ಲಿ ಸರಳ ರೇಖೆಯಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವಗಳ ನಡುವೆ ಸಂಚರಿಸುವ ಕಾರಣದಿಂದಲೆ ನಮ್ಮಲ್ಲಿ ಋತುಮಾನ ಬದಲಾವಣೆಗಳಾಗುತ್ತವೆ.
* ಚಪ್ಪಟೆಯಾಕಾರದಲ್ಲಿರುವ ಗುಂಡಗಿರುವ ಗೋಳ ನಮ್ಮ ಭೂಮಿ ಸೂರ್ಯನಿಗೆ ಮುಖ ಮಾಡಿದಾಗ ಹಗಲಾಗುತ್ತದೆ, ಬೆನ್ನು ತಿರುಗಿಸಿದಾಗ ರಾತ್ರಿಯಾಗುತ್ತದೆ.
* ಉತ್ತರ ಮತ್ತು ದಕ್ಷಿಣ ಧ್ರುವಗಳ ನಟ್ಟ ನಡುವಿನ ರೇಖೆಯೇ ಭೂಮಧ್ಯೆ ರೇಖೆಯೂ ಆಗಿದೆ. ಈಜಿಪ್ಟಿನ ಗ್ರೇಟ್ ಪಿರಮಿಡ್ ಆಫ್ ಗೀಜಾವನ್ನು ಭೂಮಿಯ ಕೇಂದ್ರ ಅಥವಾ ಜಿಯೋಗ್ರಫಿಕ್ ಸೆಂಟರ್ ಎಂದು ಗುರುತಿಸಿದ್ದಾರೆ.
* ಸೌರಮಂಡಲದಲ್ಲಿ ನಮ್ಮ ಭೂಮಿ ನೀಲಿ ಬಣ್ಣದಲ್ಲಿ ಕಾಣುವ ಕಾರಣವೇನೆಂದರೆ ಇಲ್ಲಿ ಶೇ. 70ರಷ್ಟು ಭಾಗ ನೀರು ತುಂಬಿಕೊಂಡಿದೆ. ಈ 70 ಪ್ರತಿಶತ ನೀರಿನಲ್ಲಿ ಸಿಹಿನೀರಿನ ಮೂಲಗಳು ಕೇವಲ ಶೇ.3ರಷ್ಟು ಮಾತ್ರ; ಇನ್ನುಳಿದ ಶೇ.67% ಉಪ್ಪುನೀರು. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಈ 3% ಸಿಹಿನೀರಿನಲ್ಲೂ ಶೇ.2ರಷ್ಟು ಭಾಗ ಹಿಮಗಡ್ಡೆ, ಅಲ್ಲಿಗೆ ನಮಗೆ ಲಭ್ಯವಿರುವ ನದಿ, ಹೊಳೆ, ಸರೋವರಗಳು ಕೇವಲ 1% ಮಾತ್ರ.
* ಅನಂತ ಖಗೋಳ ಅವಕಾಶದಿಂದ ಭೂಮಿ ಅತ್ಯಂತ ಹೊಳೆಯುವ ಗ್ರಹವಾಗಿ ಕಾಣಿಸುತ್ತದೆ, ಕಾರಣ ನಮ್ಮ ಭೂಮಿಯಲ್ಲಿ ಎಲ್ಲಾ ದಿಕ್ಕುಗಳಿಂದ ಆವರಿಸಿಕೊಂಡಿರುವ ಅಪಾರ ಜಲರಾಶಿ. ನೀರಿನಲ್ಲಿ ಸೂರ್ಯರಶ್ಮಿ ಪ್ರತಿಫಲಿತವಾಗುವುದರಿಂದ ಭೂಮಿ ಪ್ರಜ್ವಲಿಸುತ್ತದೆ.
* ಭೂಮಿಯ ಮೂರು ಮೇಲ್ಮೈ ಹೊದಿಕೆಗಳು ಮೂರು ಭಿನ್ನ ವಸ್ತುಗಳಿಂದ ಸೃಷ್ಟಿಯಾಗಿದೆ. ಮೊದಲಿನ ಹೊದಿಕೆ ಗಡುಸು ಮೇಲ್ಮೈ(crust); ಇದರಲ್ಲಿ 32% ಕಬ್ಬಿಣ, 30% ಆಮ್ಲಜನಿಕ, 14% ಸಿಲಿಕಾನ್, 3% ಸಲ್ಫರ್, 2% ನಿಕ್ಕಲ್ ಗಳಿಂದ ಆವೃತ್ತವಾಗಿದೆ. ಇವುಗಳ ಒಟ್ಟು ಮೊತ್ತ 96% ಆದರೆ ಉಳಿದ 4% ಕ್ಯಾಲ್ಸಿಯಂ ಮತ್ತು ಅಲ್ಯೂಮಿನಿಯಂನಂತಹ ವಸ್ತುಗಳು.
* ಎರಡನೇ ಹೊದಿಕೆ ಒಳಪದರ(mantle); ಇದು 44.8% ಆಮ್ಲಜನಿಕ, 21.5% ಸಿಲಿಕಾನ್, 22.8% ಮೆಗ್ನೀಶಿಯಂಗಳಿಂದ ಮತ್ತುಳಿದ ಮೊತ್ತ ಕಬ್ಬಿಣ, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಮತ್ತು ಪೊಟ್ಯಾಷಿಯಂನಿಂದ ತಯರಾಗಿದೆ. ಭೂಮಿಯ ಈ ಪದರದ ವಿಸ್ತೀರ್ಣವೇ ಅತಿ ಹೆಚ್ಚು ಅಂದರೆ ಸರಿಸುಮಾರು 2970 ಕಿಲೋಮೀಟರ್. ಅಂದರೆ ಶೇ. 84ರಷ್ಟು ಭೂಮಿಯ ಪದರ ಈ ಹೊದಿಕೆಯಿಂದ ಆವೃತ್ತವಾಗಿದೆ.
* ಮೂರನೆಯ ಹೊದಿಕೆಯೇ ಭೂಮೂಲ(core); ಹೊರಕವಚ ಮತ್ತು ಒಳಕವಚ ಎನ್ನುವ ಇದು ಎರಡು ಪದರಗಳಿಂದ ಕೂಡಿದೆ. ಇಲ್ಲಿರುವ ಮೂಲವಸ್ತುಗಳು ಕಬ್ಬಿಣ ಮತ್ತು ನಿಕ್ಕಲ್. ಈ ಭೂಮೂಲದ ಹೊರಕವಚ ದ್ರವರೂಪದಲ್ಲಿದೆ ಮತ್ತು ಒಳಕವಚ ಘನರೂಪದಲ್ಲಿದ್ದು ಸೂರ್ಯನಷ್ಟೇ ಶಾಖ ಹೊಂದಿದೆ ಎಂದು ನಂಬಲಾಗಿದೆ.
* ಭೂಮೂಲದಲ್ಲಿರುವ ನಿಕ್ಕಲ್ ಮತ್ತು ಕಬ್ಬಿಣದ ದಾತುಗಳಿಂದಾಗಿ ಭೂಮಿ ಪರಿಭ್ರಮಣೆ ನಡೆಸುವಾಗ ಪ್ರಬಲ ಕಾಂತೀಯ ಕ್ಷೇತ್ರ ರೂಪುಗೊಂಡು ಸೌರಮಾರುತಗಳ ಪ್ರಭಾವದಿಂದ ರಕ್ಷಿಸುತ್ತಿದೆ ಎನ್ನುವ ವಾದವೂ ಇದೆ.
* ಭೂವಿಜ್ಞಾನಿಗಳ ಪ್ರಕಾರ ಇಳೆಯ ಸುತ್ತುವಿಕೆ ಕ್ರಮೇಣ ನಿಧಾನವಾಗುತ್ತಿದೆ. ಇದರ ಅಂದಾಜು ನೂರು ವರ್ಷಗಳಿಗೆ 17 ಮಿಲಿಸೆಕೆಂಡ್ ಅಂದರೆ 140 ಮಿಲಿಯನ್ ವರ್ಷಗಳ ನಂತರ ಭೂಮಿಯಲ್ಲಿ ಪ್ರತಿದಿನ 25 ಗಂಟೆಗಳಿರುತ್ತವೆ.
* ಭೂಮಿಯ ಸಾಂದ್ರತೆ ಕ್ಯೂಬಿಕ್ ಮೀಟರ್ ಗೆ 5.52 ಗ್ರಾಮ್. ಭೂಮಿಯ ನಂತರ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹ ಮಂಗಳ. ಅಂಗಾರಕನ ಸಾಂದ್ರತೆ 5.427 ಗ್ರಾಂ.
* ಗ್ರೀಕ್ ಪೌರಾಣಿಕ ಕಥೆಗಳ ಪ್ರಕಾರ ನಮ್ಮ ಭೂಮಿಯನ್ನು ಗೇಯಾ ಎನ್ನುವ ಮೊತ್ತ ಮೊದಲ ದೇವರು ಎಂದು ಗುರುತಿಸಲಾಗಿದೆ.
* ನಮ್ಮ ಇಡೀ ಸೌರವ್ಯವಸ್ಥೆಯಲ್ಲಿ ಘನ, ದ್ರವ ಮತ್ತು ಅನಿಲ ರೂಪದಲ್ಲಿ ನೀರಿನಂಶ ಹೊಂದಿರುವ ಏಕೈಕ ಗ್ರಹ ಭೂಮಿಯೊಂದೇ.
* ಭೂಮಿಯ ಮೂರನೆಯ ಒಂದು ಭಾಗ ಅರೆ ಮರುಭೂಮಿ ಅಥವಾ ಸಂಪೂರ್ಣ ಮರುಭೂಮಿ.
* ಸೌರಗ್ರಹಣ ಸಂಭವಿಸುವ ಏಕೈಕ ಗ್ರಹವೂ ನಮ್ಮ ಭೂಮಿಯೇ.
* ನಾಗರೀಕತೆ ಬೆಳೆದ ಮೇಲೆ ನಾವು ಮಾಡಿಕೊಂಡ ಕಾನೂನು ಒಡಂಬಡಿಕೆಗಳ ಪ್ರಕಾರ ಇಂಗ್ಲೆಂಡಿನ ರಾಣಿ ಆರನೆಯ ಒಂದು ಭೂಭಾಗದ ಅಧಿಕೃತ ಒಡತಿ.
ಆಕರಗಳು: ನ್ಯಾಷನಲ್ ಜಿಯೋಗ್ರಫಿ ವೆಬ್ ಸೈಟ್, ಕರೆಂಟ್ ಸೈನ್ಸ್, ಪ್ಲಾನೆಟ್ಸ್ ಫರ್ ಕಿಡ್ಸ್, ಸ್ಪೇಸ್ ಫ್ಯಾಕ್ಟ್ಸ್.ಕಾಮ್, ದಿ ಫ್ಯಾಕ್ಟ್ ಸೈಟ್, ವಿಕಿಪೀಡಿಯಾ ಇತ್ಯಾದಿ
-ವಿಭಾ (ವಿಶ್ವಾಸ್ ಭಾರದ್ವಾಜ್)
***








