ರಾಜ್ಯದಲ್ಲಿ ಕಾಂಗ್ರೆಸ್ ನಾಯಕರೇ ಊಹಿಸದಂತಹ ಗೆಲುವನ್ನು ಕಾಂಗ್ರೆಸ್ (Congress) ಕಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕೂಡ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ವೀಕೆಂಡ್ ವಿತ್ ರಮೇಶ್ಗೆ ಅತಿಥಿಯಾಗಿ ಡಿಕೆಶಿ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಭರ್ಜರಿ ರಾಜಕೀಯ ಜೀವನ ಅನುಭವಿಸುತ್ತಿರುವ ಹಾಗೂ ಅನುಭವಿಸಿರುವ ಡಿಕೆ ಶಿವಕುಮಾರ್ ಅವರ ಎಪಿಸೋಡ್, ವೀಕೆಂಡ್ ವಿತ್ ರಮೇಶ್ ಇತಿಹಾಸದಲ್ಲಿಯೇ ಮಹತ್ವದ ಎಪಿಸೋಡ್ ಆಗುವ ನಿರೀಕ್ಷೆ ಇದೆ. ಹಿಂದಿನ ವೀಕೆಂಡ್ನಲ್ಲಿ ನಟ ಜೈಜಗದೀಶ್ ಹಾಗೂ ಸಾಹಿತಿ ದೊಡ್ಡರಂಗೇಗೌಡ ಅವರು ಅತಿಥಿಗಳಾಗಿ ಆಗಮಿಸಿದ್ದರು. ಆದರೆ, ಈ ವಾರ ಯಾರು ಎಂಬುವುದನ್ನು ಜೀ ಕನ್ನಡ ವಾಹಿನಿ ಬಹಿರಂಗಗೊಳಿಸಿಲ್ಲ. ಮಂಗಳವಾರದಂದು ಮುಂದಿನ ವೀಕೆಂಡ್ನ ಅತಿಥಿ ಯಾರೆಂಬ ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾವುದೇ ಪ್ರೋಮೋ ಆಗಲಿ, ಸುಳಿವು ಬಿಟ್ಟುಕೊಡುವ ಫೋಟೊಗಳನ್ನಾಗಲಿ ಜೀ ಕನ್ನಡ ಹಂಚಿಕೊಂಡಿಲ್ಲ.
ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಈ ಬಾರಿ ವೀಕೆಂಡ್ ವಿತ್ ರಮೇಶ್ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಎಪಿಸೋಡ್ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇದೇ ವಾರಾಂತ್ಯಕ್ಕೆ ಎರಡು ದಿನಗಳ ಕಾಲ ಡಿ.ಕೆ.ಶಿವಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ರಾಜಕೀಯ ನಾಯಕರು ಎಪಿಸೋಡ್ನಲ್ಲಿ ನೇರವಾಗಿ ಹಾಗೂ ವಿಡಿಯೋ ಮೂಲಕ ಭಾಗವಹಿಸಲಿದ್ದಾರೆ. ಬಾಲ್ಯ, ಅವರ ಕುಟುಂಬ, ಶಿಕ್ಷಣ, ಕಾಲೇಜು ದಿನಗಳು, ಹೋರಾಟ, ಕಾಂಗ್ರೆಸ್ ಪಕ್ಷ ಸೇರ್ಪಡೆ, ಮೊದಲ ಚುನಾವಣೆ ಸೋಲು, ದೇವೇಗೌಡರನ್ನು ಸೋಲಿಸಿದ್ದು, ದೊಡ್ಡ ರಾಜಕಾರಣಿಗಳ ಸಖ್ಯ, ರಾಜಕೀಯದ ಪಟ್ಟುಗಳು. ಸಿಬಿಐ, ಇಡಿ, ಐಟಿ ಪ್ರಕರಣಗಳು ಈ ಸಂದರ್ಭದಲ್ಲ ಚರ್ಚೆಯಾಗಿವೆ ಎನ್ನಲಾಗುತ್ತಿದೆ.