ಮೀಸಲಾತಿ ಕೇಳುತ್ತಿರುವವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ : ಆರ್.ಅಶೋಕ್
ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಮೀಸಲಾತಿ ಹೋರಾಟ ಮಾಡುತ್ತಿರುವವರು ಒಂದು ಕ್ಷಣ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಮೀಸಲಾತಿ ಹೋರಾಟ ಮಾಡುವವರಿಗೆ ಸಚಿವ ಆರ್.ಅಶೋಕ್ ಮನವಿ ಮಾಡಿಕೊಂಡಿದ್ದಾರೆ.
ದೊಡ್ಡಬಳ್ಳಾಪುರದ ಹೊಸಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೀಸಲಾತಿಗೆ ಆಗ್ರಹಿಸಿ ಸಮುದಾಯಗಳಿಂದ ಹೋರಾಟ ನಡೆಯುತ್ತಿವೆ.
ಮೀಸಲಾತಿ ಹೋರಾಟ ಮಾಡುತ್ತಿರುವವರು ಒಂದು ಕ್ಷಣ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಿಜವಾದ ಬಡವರು ಇರುವ ಸಮುದಾಯಕ್ಕೆ ಮೀಸಲಾತಿ ಸಿಗಬೇಕು.
ಇರೋದು ಒಂದೇ ರೊಟ್ಟಿ ಕೇಳುತ್ತಿರುವುದು ನೂರಾರು ರೊಟ್ಟಿಯನ್ನ. ಸಮಾಜ ನಮ್ಮದೇ, ಬೇರೆಯವರ ಅನ್ನಕ್ಕೆ ಕೈ ಹಾಕಬಾರದು ಎಂದು ಹೇಳಿ ಮೀಸಲಾತಿ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದರು.
ಇನ್ನು ರಾಜ್ಯದಲ್ಲಿ 2ಎ, ಎಸ್ ಸಿ ಮತ್ತು ಎಸ್ ಟಿಗೆ ಸೇರಿಸುವಂತೆ ಹೋರಾಟ ನಡೆಯುತ್ತಿದ್ದು, ತುಳಿತಕ್ಕೆ ಒಳಗಾಗಿರುವವರ ಮೀಸಲಾತಿಯನ್ನು ಕಿತ್ತು ಮತ್ತೊಂದು ಸಮುದಾಯಕ್ಕೆ ಕೊಡುವುದು ಒಳ್ಳೆಯದಲ್ಲ.
ಯಾರು ತುಳಿತಕ್ಕೆ ಒಳಗಾಗಿದ್ದಾರೆ, ಯಾರಿಗೆ ಕೇಳುವ ಬಾಯಿಲ್ಲ, ಅರ್ಜಿ ಕೊಡುವ ಕೈಯಿಲ್ಲ ಅವರ ಧ್ವನಿಯಾಗುತ್ತೇನೆಂದು ಅಂಬೇಡ್ಕರ್ ಹೇಳಿದ್ರು. ಅವರ ಆಶಯ ಮಣ್ಣು ಪಾಲಾಗಬಾರದು ಎಂದು ಹೇಳಿದ್ದಾರೆ.
