ಮುಂಬೈ: ದೇಶದಲ್ಲಿ ಕೊರೊನಾ ಮಹಾಮಾರಿಯು ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿರುವ ಹಿನ್ನೆಲೆ ಏ.16 ರನಂತ್ರ ಐಪಿಎಲ್ ನಡೆಸಲು ನಿರ್ಧಾರ ಮಾಡಲಾಗಿತ್ತು. ಆದ್ರೆ ಏಪ್ರಿಲ್ ತಿಂಗಳಿನಲ್ಲೂ ಐಪಿಎಲ್ ನಡೆಸಲು ಸಾಧ್ಯವಾಗುವುದು ತೀರಾ ಕಡಿಮೆಯಾಗಿರುವುದರಿಂದ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಜೂನ್- ಸೆಪ್ಟೆಂಬರ್ ನಡುವೆ ನಡೆಸಲು ಐಪಿಎಲ್ ಮಂಡಳಿ ಚಿಂತಿಸಿದೆ ಎಂಬ ಅಂಶಗಳು ಕೇಳಿಬರುತ್ತಿವೆ.
ಸದ್ಯ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಐಪಿಎಲನ್ನು ರದ್ದು ಮಾಡಲೇಬೇಕಾದ ಒತ್ತಡದಲ್ಲಿದೆ ಬಿಸಿಸಿಐ. ಒಂದು ವೇಳೆ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐಗೆ ಭಾರಿ ನಷ್ಟವಾಗುವ ಸಾಧ್ಯತೆಗಳಿವೆ. ಹೀಗಾಗಿ ಜೂನ್ ಅಥವಾ ಸೆಪ್ಟೆಂಬರ್ ನಲ್ಲಿ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಬಿಗ್ ಬಾಸ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಆಗಲೂ ಭಾರತದಲ್ಲಿ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ವಿದೇಶದಲ್ಲಿ ನಡೆಸಲು ಕೂಡ ಬಿಸಿಸಿಐ ಮುಂದಾಗಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಸೆಪ್ಟೆಂಬರ್ ನಲ್ಲಿ ಏಷ್ಯಾ ಕಪ್ ನಡೆಯಬೇಕಿದ್ದು ಅದನ್ನು ಮುಂದೂಡಿ ಆ ವೇಳೆಯಲ್ಲಿ ಐಪಿಎಲ್ ಅನ್ನು ಆಯೋಜಿಸಬಹುದು ಎಂಬ ಲೆಕ್ಕಾಚಾರವನ್ನು ಬಿಸಿಸಿಐ ಹಾಕಿಕೊಂಡಿದೆ. ಆಗ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಸರಣಿ ಬಿಟ್ಟರೆ ಬೇರೆ ಯಾವ ದೇಶಗಳ ನಡುವೆಯೂ ಪಂದ್ಯಗಳು ನಡೆಯುವುದಿಲ್ಲ. ಆದ್ದರಿಂದ ಮುಂಬರುವ ಪುರುಷರ ಚುಟುಕು ವಿಶ್ವಕಪ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಂದಾಜಿಸಲಾಗಿದೆ. ಈ ಹಿಂದೆ 2009 ಹಾಗೂ 2014ರಲ್ಲೂ ವಿದೇಶಗಳಲ್ಲಿ ಐಪಿಎಲ್ ಅನ್ನು ಆಯೋಜಿಸಲಾಗಿತ್ತು.