ಯುಪಿ ಸಿಎಂ ಕಚೇರಿ ಎದುರು ಆತ್ಮಹತ್ಯೆ ಯತ್ನ ಪ್ರಕರಣ – ಅಮೆಥಿಯ ಮೂವರು ಪೊಲೀಸರ ಅಮಾನತು
ಲಕ್ನೋ, ಜುಲೈ19: ಭೂ ವಿವಾದ ಪ್ರಕರಣದಲ್ಲಿ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಲಖನೌದ ಮುಖ್ಯಮಂತ್ರಿ ಕಚೇರಿಯ ಹೊರಗೆ ಜಿಲ್ಲೆಯ ಮಹಿಳೆಯೊಬ್ಬರು ಮತ್ತು ಅವರ ಮಗಳು ತಮ್ಮನ್ನು ತಾವು ಬೆಂಕಿ ಹಚ್ಚಿದ ಘಟನೆಯ ನಂತರ ಅಮೆಥಿಯ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಆದಾಗ್ಯೂ, ಕ್ರಿಮಿನಲ್ ಪಿತೂರಿಯ ಭಾಗವಾಗಿ ತಮಗೆ ತಾವೇ ಬೆಂಕಿಯಿಡಲು ಮಹಿಳೆಯರನ್ನು ಕಾಂಗ್ರೆಸ್ ಮುಖಂಡ ಅನೂಪ್ ಪಟೇಲ್ ಪ್ರಚೋದಿಸಿದ್ದಾರೆ ಮತ್ತು ಆತನ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ.
ಈ ನಡುವೆ, ಬಿಎಸ್ಪಿ ಮತ್ತು ಎಸ್ಪಿ, ಯುಪಿ ಸರ್ಕಾರದ ಮೇಲೆ ಕಿಡಿಕಾರಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಲಕ್ನೋ ಸಿವಿಲ್ ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಮಹಿಳೆ ಶೇಕಡಾ 90 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದು, ಜೀವ ರಕ್ಷಕದ ಬೆಂಬಲದಲ್ಲಿದ್ದರೆ, ಮಗಳ ಆರೋಗ್ಯ ಸ್ಥಿರವಾಗಿದೆ.

ಅಮೆಥಿಯ ಜಾಮೋ ಪೊಲೀಸ್ ಠಾಣೆಯ ಉಸ್ತುವಾರಿ ಎಸ್.ಎಚ್.ಒ ಸೇರಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ವರದಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅಮೆಥಿ ಪೊಲೀಸ್ ವರಿಷ್ಠಾಧಿಕಾರಿ ಖಯಾತಿ ಗರ್ಗ್ ಹೇಳಿದ್ದಾರೆ. ಸಫಿಯಾ ಅಥವಾ ಅವರ ಮಗಳು ಗುಡಿಯಾ ಅವರಿಂದ ಯಾವುದೇ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಗರ್ಗ್ ಮತ್ತು ಅಮೆಥಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಅವರು, ಸಫಿಯಾ (55) ತನ್ನ ನೆರೆಹೊರೆಯವರೊಂದಿಗೆ ಚರಂಡಿ ಬಗ್ಗೆ ವಿವಾದವನ್ನು ಹೊಂದಿದ್ದಳು ಮತ್ತು ಈ ಹಿಂದೆ ಹಲವು ಬಾರಿ ಗಲಭೆಗಳು ಸಂಭವಿಸಿದ್ದವು.
ರಾಜ್ಯ ರಾಜಧಾನಿಯಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಯ ಹೊರಗೆ ಶುಕ್ರವಾರ ಸಂಜೆ ಸಫಿಯಾ ಮತ್ತು ಅವರ ಮಗಳು ಬೆಂಕಿ ಹಚ್ಚಿಕೊಂಡಿದ್ದು, ಇಬ್ಬರನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲಕ್ನೋದ ಶ್ಯಾಮಾ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅಶುತೋಷ್ ದುಬೆ ಅವರು, ‘ತಾಯಿ ಶೇಕಡಾ 90 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರ ಮಗಳು ಶೇಕಡಾ 15 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಲಕ್ನೋ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಮಾತನಾಡಿ, ಈ ಘಟನೆಯು ಕ್ರಿಮಿನಲ್ ಪಿತೂರಿಯಾಗಿದ್ದು, ಇದರ ಭಾಗವಾಗಿ ಕೆಲವರು ಅವರನ್ನು (ಸಫಿಯಾ ಮತ್ತು ಅವಳ ಮಗಳು) ಪ್ರಚೋದಿಸಿದರು. ಈ ನಿಟ್ಟಿನಲ್ಲಿ ಆಸ್ಮಾ, ಸುಲ್ತಾನ್, ಕದಿರ್ ಖಾನ್ (ಎಐಎಂಐಎಂನ ಅಮೆಥಿ ಜಿಲ್ಲಾಧ್ಯಕ್ಷ) ಮತ್ತು ಅನೂಪ್ ಪಟೇಲ್ (ಮಾಜಿ ಕಾಂಗ್ರೆಸ್ ವಕ್ತಾರ) ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
‘ಲಈ ಮಹಿಳೆಯರು ಯುಪಿ ಕಾಂಗ್ರೆಸ್ ಕಚೇರಿಗೆ ಹೋಗಿ ಅನೂಪ್ ಪಟೇಲ್ ಅವರನ್ನು ಭೇಟಿಯಾಗಿದ್ದರು ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ಪಾಂಡೆ ಹೇಳಿದರು.
ಲಕ್ನೋದಲ್ಲಿ ವರದಿಗಾರರನ್ನು ಸಂಪರ್ಕಿಸಿ ಸಮಸ್ಯೆಯನ್ನು ಹೈಲೈಟ್ ಮಾಡಲು ಕೇಳಲಾಯಿತು. ವರದಿಗಾರ ಕೂಡ ಇದನ್ನು ಒಪ್ಪಿಕೊಂಡಿದ್ದಾನೆ ಎಂದರು.
ಯುಪಿ ಸರ್ಕಾರದಿಂದ ನ್ಯಾಯ ಸಿಗದ ಹಿನ್ನಲೆಯಲ್ಲಿ ತಾಯಿ ಮತ್ತು ಮಗಳು ತಮ್ಮನ್ನು ತಾವು ಬೆಂಕಿ ಹಚ್ಚಿಕೊಳ್ಳಬೇಕಾಯಿತು ಎಂದು ಸರ್ಕಾರವನ್ನು ವಿರೋಧಿಸಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥ ಮಾಯಾವತಿ ಹೇಳಿದ್ದಾರೆ. ಈ ಘಟನೆಯು ಮಲಗಿರುವ ಸರ್ಕಾರವನ್ನು ಎಚ್ಚರಗೊಳಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಯುಪಿ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಈ ವಿಷಯದಲ್ಲಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.








