ಕೊರೋನಾ ನಡುವೆಯೇ ಇಂಗ್ಲೆಂಡ್ – ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ನಡೆಯುವುದು ಖಚಿತ…!
ಕೊರೋನಾ ವೈರಸ್ ಸೋಂಕಿನ ನಡುವೆಯೂ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟೆಸ್ಟ್ ಪಂದ್ಯಗಳನ್ನು ಆಡಲು ರೆಡಿಯಾಗಿವೆ. ಮುಂದಿನ ಇಂಗ್ಲೆಂಡ್ನಲ್ಲಿ ವೆಸ್ಟ್ ಇಂಡೀಸ್ ತಂಡ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಆದ್ರೆ ವೆಸ್ಟ್ ಇಂಡೀಸ್ನ ಮೂವರು ಆಟಗಾರರು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದಾರೆ. ಈ ಟೆಸ್ಟ್ ಸರಣಿ ಜುಲೈ 8ರಿಂದ ಆರಂಭವಾಗಲಿದೆ. ಜೂನ್ 9 ರಂದು ಇಂಗ್ಲೆಂಡ್ಗೆ ತಲುಪಲಿರುವ ವೆಸ್ಟ್ ಇಂಡೀಸ್ ತಂಡ ಕ್ವಾರಂಟೈನ್ಗೆ ಒಳಪಡಲಿದೆ. ಹಾಗೇ ಅಭ್ಯಾಸವನ್ನು ನಡೆಸಲಿದೆ.
ವೆಸ್ಟ್ ಇಂಡೀಸ್ನ ಡರೇನ್ ಬ್ರೇವೋ, ಶಿಮ್ರಾನ್ ಹೆಟ್ಮೆರ್ ಮತ್ತು ಕಿಮೋ ಪೌಲ್ ಅವರು ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಆದ್ರೆ ಈ ಮೂವರು ಆಟಗಾರರು ಸ್ಪಷ್ಟವಾದ ಕಾರಣವನ್ನು ನೀಡಿಲ್ಲ. ಆದ್ರೂ ಅವರ ನಿರ್ಧಾರವನ್ನು ಗೌರವಿಸುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಹೇಳಿದೆ. ಇನ್ನು ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಇಬ್ಬರು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಕ್ರೂಮಾ ಬೊನೆರ್ ಮತ್ತು ವೇಗದ ಬೌಲರ್ ಚೆಮರ್ ಹೋಲ್ಡರ್ ಅವರು ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಜುಲೈ 8ರಂದ ಆಗಿಯಾಸ್ ಬೌಲ್ನಲ್ಲಿ ನಡೆದ್ರೆ, ಜುಲೈ 16ರಿಂದ ಹಾಗೂ ಜುಲೈ 24ರವರೆಗೆ ಓಲ್ಡ್ ಟ್ರಾಫೋರ್ಡ್ನಲ್ಲಿ ನಡೆಯಲಿದೆ. ಆದ್ರೆ ಈ ಪಂದ್ಯ ನೋಡಲು ಪ್ರೇಕ್ಷಕರಿಗೆ ಅವಕಾಶವಿಲ್ಲ. ಅದೂ ಅಲ್ಲದೆ ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಮಾರ್ಗಸೂಚಿಗಳನ್ನು ಪರಿಪಾಲಿಸಿಕೊಂಡು ಟೆಸ್ಟ್ ಸರಣಿಯನ್ನು ನಡೆಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದೆ.
ವೆಸ್ಟ್ ಇಂಡೀಸ್ ತಂಡ – ಜೇಸನ್ ಹೋಲ್ಡರ್ (ನಾಯಕ)ಮ ಜೆರ್ಮೆನ್ ಬ್ಲ್ಯಾಕ್ವುಡ್, ಕ್ರೂಮಾಹ್ ಬೊನೇರ್, ಕ್ರೈಗ್ ಬ್ರಾತ್ ವೈಟ್, ಶಾಮ್ರಾಹ್ ಬ್ರೂಕ್ಸ್, ಜಾನ್ ಕ್ಯಾಂಪ್ಬೆಲ್, ರೋಸ್ಟನ್ ಚೇಸ್, ರಕೀಮ್ ಕಾರ್ನ್ವಾಲ್, ಶೇಣ್ ಡೋವ್ರಿಚ್, ಚೇಮರ್ ಹೋಲ್ಡರ್, ಶಾಹಿ ಹೋಪ್, ಅಲ್ಝಾರಿ ಜೋಸೆಫ್, ರೇಮಾನ್ ರಿಫೆರ್, ಕೇಮರ್ ರಾಚ್.
ರಿಸರ್ವ್ ಆಟಗಾರರು – ಸುನೀಲ್ ಎಂಬ್ರೀಸ್, ಜೊಶುವಾ ಡಾ ಸಿಲ್ವಾ, ಶಾನೋನ್ ಗ್ರಾಬ್ರಿಯಲ್, ಕೀಯೋನ್ ಹಾರ್ಡಿಂಗ್, ಕೈಲ್ ಮೇಯೇರ್ಸ್, ಪ್ರಿಸ್ಟನ್ ಮೆಕ್ ಸ್ವೀನ್, ಮಾರ್ಕಿನೋ ಮಿಂಡ್ಲೆ, ಶೇನ್ ಮೊಸ್ಲೇಯ್, ಆಂಡರ್ಸನ್ ಫಿಲಿಪ್, ಓಶಾನ್ ಥಾಮಸ್, ಜೊಮೇಲ್ ವಾರಿಕ್ಯಾನ್.