ಈ ‘ಎಲ್ ಡೊರಾಡೊ’ ಎಂಬ ಹೆಸರು ಕನ್ನಡ ಸಿನಿಮಾ ಕೆ.ಜಿ.ಎಫ್ ನಲ್ಲಿ ಕೇಳಿ ಬಂದಿತ್ತು. ಈ ಚಿತ್ರದಲ್ಲಿ ಕೋಲಾರದ ಕೆ.ಜಿ.ಎಫ್ ಅನ್ನು ಎಲ್ ಡೊರಾಡೊಗೆ ಹೋಲಿಸಿ ಅದನ್ನು ‘ಕರ್ನಾಟಕದ ಎಲ್ ಡೊರಾಡೊ’ ಎಂದು ಕರೆಯಲಾಗಿದೆ. ಯಾವುದು ಈ ಎಲ್ಡೊರಾಡೊ ? ಇದು ಎಲ್ಲಿದೆ ? ಏನಿದರ ವಿಶೇಷ ? ಬನ್ನಿ ತಿಳಿಯೋಣ..
ಎಲ್ ಡೊರಾಡೊ ಎಂಬ ಹೆಸರನ್ನ ಮೊಟ್ಟ ಮೊದಲು ಪ್ರಚುರ ಪಡಿಸಿದವರು ಹದಿನಾರನೇ ಶತಮಾನದ ಸ್ಪ್ಯಾನಿಷ್ ಪಯಣಿಗರು. 1510ರ ಸುಮಾರಿನಲ್ಲಿ ದಕ್ಷಿಣ ಅಮೇರಿಕದ ಹಲವೆಡೆಗೆ ಹಲವು ಕಾರಣಗಳಿಗಾಗಿ ವಲಸೆ ಬಂದ ಈ ಯಾತ್ರಿಕರಿಗೆ ಅಲ್ಲಿನ ಆಂಡೀಸ್ ಪರ್ವತಗಳ ಕಾಡಿನ ನಡುವೆ ಈ ‘ಎಲ್ ಡೊರಾಡೊ’ ಎಂಬ ಚಿನ್ನದ ನಗರಿ ಇದ್ದುದಾಗಿ ಸುದ್ದಿ ಬಂತು.
ಈ ‘ಎಲ್ ಡೊರಾಡೊ’ ನಗರ ಅವರ ಕಣ್ಣು ಕುಕ್ಕಲು ಹಲವಾರು ಸಂಗತಿಗಳಿದ್ದವು. ಅವುಗಳಲ್ಲಿ ಮುಖ್ಯವಾದುದು ಈ ನಗರದ ಸುತ್ತ ಮುತ್ತಾ ಇರುವ ಕೆಲ ನಿಗೂಢ ಬುಡಕಟ್ಟು ಜನರ ಬಳಿ ಅಸಾಧ್ಯ ಪ್ರಮಾಣದ ಚಿನ್ನ ಹಾಗೂ ಚಿನ್ನದ ಖನಿಜ ಇದೆ ಎಂಬ ವಿಷಯ.
ದಕ್ಷಿಣ ಅಮೇರಿಕಾ ಖಂಡವು ಪುರಾತನ ಕಾಲದಿಂದಲೂ ಅಲ್ಲಿನ ಅನೇಕ ಪ್ರಾಚೀನ ಬುಡಕಟ್ಟು ಜನರ ಸುಪರ್ದಿಯಲ್ಲೇ ಇದ್ದ ಖಂಡ ಎಂಬುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಖಂಡದಲ್ಲಿ ಸಾವಿರಾರು ವರ್ಷಗಳ ಹಿಂದೆ ಯಾವ ಬಿಳಿ ಜನ ಸಮುದಾಯವೂ ಇರಲಿಲ್ಲ. ಕೆಂಪು ಮೈ ಬಣ್ಣ ಇಲ್ಲವೇ ಕಪ್ಪು ವರ್ಣದ ಅನೇಕ ಮೂಲ ನಿವಾಸಿಗಳ ತಾಣವಾಗಿದ್ದ ದಕ್ಷಿಣ ಅಮೇರಿಕಾ ಪೂರ್ತಿ ಬುಡಕಟ್ಟು ಜನಾಂಗದವರಿಂದಲೇ ತುಂಬಿತ್ತು. ಇಂಕಾ, ಮಾಯನ್, ರೆಡ್ ಇಂಡಿಯನ್, ಮುಯಿಸ್ಕಾ ಮುಂತಾದ 400 ಕ್ಕೂ ಹೆಚ್ಚು ವಿಧದ ಸಣ್ಣ ಪುಟ್ಟ ಹಾಗೂ ಬೃಹತ್ ಬುಡಕಟ್ಟು ಸಮುದಾಯಗಳು ದಕ್ಷಿಣ ಅಮೇರಿಕದ ತುಂಬ ಇದ್ದವು.
ಮಧ್ಯಯುಗದ ಅನೇಕ ಯೂರೋಪಿಯನ್ ಆಕ್ರಮಣಕಾರರಿಂದ ಇಲ್ಲಿದ್ದ ಎಷ್ಟೊ ಸಮುದಾಯಗಳು ಮರೆಯಾಗಿ ನಂತರ ಅವರ ಪ್ರಾಬಲ್ಯಕ್ಕೆ ಸೋತು ಕ್ರಮೇಣ ಕ್ಷೀಣಿಸಿ ಹೋದವು. ಹದಿನೈದನೇ ಶತಮಾನದ ಹೊತ್ತಿಗೆ ಇಂಕಾ, ಮಾಯನ್ ಹಾಗೂ ಕೆಲ ರೆಡ್ ಇಂಡಿಯನ್ ಸಮುದಾಯಗಳಿದ್ದವು. ಇವುಗಳಲ್ಲಿ ಇಂಕಾ ಬಹುದೊಡ್ಡ ಬುಡಕಟ್ಟು ಸಮುದಾಯವಾಗಿ ಗುರುತಿಸಿಕೊಂಡಿತ್ತು. ಈಗಿನ ಕೊಲಂಬಿಯಾದ ಬಳಿ ಇರುವ ಬೊಗಟಾ ಪ್ರಾಂತ್ಯದ ಬಳಿ ಇರುವ ಗುವಾವವಿಟ ನದಿಯ ತಟದಲ್ಲೆ ಮುಯಿಸ್ಕಾ ಎಂಬ ಬುಡಕಟ್ಟು ಸಮುದಾಯ ಇದೆಯೆಂದೂ. ಉತ್ಸವಗಳ ದಿನದಂದು ಅದರ ರಾಜನಿಗೆ ಅವನ ಸೇವಕರು ಚಿನ್ನದ ಧೂಳನ್ನ ಅವನ ಮೈ ಕೈಗೆಲ್ಲ ಮೆತ್ತುತ್ತಾರೆಂದೂ. ನಂತರ ನದಿಯೊಳಕ್ಕೆ ಇಳಿದು ಚಿನ್ನದ ಲೇಪನವನ್ನ ಆ ನೀರಿನಿಂದ ತೊಳೆದುಕೊಳ್ಳುವ ಆ ರಾಜ ತನ್ನ ಬಳಿ ಇರುವ ಸಾಕಷ್ಟು ಪ್ರಮಾಣದ ಚಿನ್ನ ಹಾಗೂ ಚಿನ್ನದ ವಸ್ತುಗಳನ್ನ ನದಿಯೊಳಕ್ಕೆ ಎಸೆದು ಅಲ್ಲಿರುವ ಅವರ ದೈವವನ್ನ ಸುಪ್ರೀತಗೊಳಿಸುತ್ತಾನೆಂದೂ ಈ ದಾಳಿಕೋರರಿಗೆ ಇತರೆ ಜನ ಸಮುದಾಯದವರಿಂದ ಸುದ್ದಿಗಳು ಕೇಳಿ ಬಂದವು !
ಚಿನ್ನದ ಲೇಪನದಿಂದಲೆ ಸ್ನಾನ ಮಾಡುವಷ್ಟು ಸಂಪತ್ತು ಇವರ ಬಳಿ ಇದೆಯೇ ಎಂದು ದಂಗಾದ ಅನೇಕ ಸ್ಪಾನಿಷ್ ಆಸೆಬುರುಕರು ಈ ನಿಗೂಢ ಚಿನ್ನದ ನಗರಿ ‘ಎಲ್ ಡೊರಾಡೊ’ ದ ಹಿಂದೆ ಬಿದ್ದರು. 1531-38 ರ ಅವಧಿಯಲ್ಲೇ ಮೊದಲ ಶೋಧ ಶುರುವಾಯ್ತು. ಈ ಸಮಯದಲ್ಲಿ ಸ್ಪಾನಿಷ್ ವಲಸಿಗನಾಗಿದ್ದ ಗಾಂಜ಼ಾಲೊ ಎಂಬ ನಾವಿಕ ತನ್ನ ಪಡೆಯೊಂದಿಗೆ ಕೊಲಂಬಿಯಾದ ಕಾಡುಗಳಲ್ಲಿದ್ದ ಮುಯಿಸ್ಕಾ (Muisca) ಜನರ ಸಂತತಿಯನ್ನ ಪತ್ತೆ ಹಚ್ಚಿ ಅವರ ಬಳಿ ಇದ್ದ ಸಾಕಷ್ಟು ಸಂಪತ್ತನ್ನ ಲೂಟಿ ಮಾಡಿದನಲ್ಲದೆ, ಹೆಚ್ಚಿನ ನಿಧಿಯ ಮಾಹಿತಿಗಾಗಿ ಅವರಲ್ಲಿ ಅನೇಕರನ್ನ ಚಿತ್ರಹಿಂಸೆ ನೀಡಿ ಕೊಂದು ಹಾಕಿದ.
ಹದಿನೇಳನೇ ಶತಮಾನದವರೆಗೂ ಹಲವಾರು ಸ್ಪಾನಿಷ್ ಹಾಗೂ ಜರ್ಮನ್ ನಾವಿಕರ ದಾಳಿಗೆ ಸಿಲುಕಿ ತತ್ತರಿಸಿ ಹೋದ ಇಲ್ಲಿನ ಬುಡಕಟ್ಟು ಜನರ ಮಾರಣಹೋಮಕ್ಕೆ ಈ ನಿರ್ದಯಿ ‘ಎಲ್ ಡೊರಾಡೊ’ ಕಾರಣವಾಯ್ತು. ಪೆರು ಮುಂತಾದೆಡೆ ಇದ್ದ ಹಲವಾರು ಬುಡಕಟ್ಟು ಜನರನ್ನ ದೋಚಿದ ವಲಸಿಗರು, ಒಂದು ಕಾಲದ ಸಂಪದ್ಭರಿತ ನಾಡಾಗಿದ್ದ ಪೆರುವನ್ನ ಬರಿಗೈ ನಾಡಾಗಿ ಮಾಡಿದರು.
ಆರಂಭಿಕ ಹಂತದ ಸ್ಪಾನಿಷ್ ಯಾತ್ರಿಕರಿಗೆ ಚಿನ್ನದ ಅಕ್ಷಯ ಪಾತ್ರೆ ಎಂದು ನಂಬಲಾಗಿದ್ದ ಬೊಗಾಟ (ಕೊಲಂಬಿಯಾದ ಈಗಿನ ರಾಜಧಾನಿ) ಬಳಿಯಿದ್ದ ಗುವಾಟವಿಟ ನದಿ ಪತ್ತೆಯಾಯ್ತು. ಹಾಗೂ ಅದನ್ನ ಶೋಧಿಸಿದ ಅವರಿಗೆ ಅದರಲ್ಲಿ ಒಂದಷ್ಟು ಪ್ರಮಾಣದ ಕೆಲ ಹಳೆ ಚಿನ್ನದ ವಸ್ತುಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಚಿನ್ನದ ಪೆಸೋ (peso) ನಾಣ್ಯಗಳು ದೊರೆತವು. ಆದರೆ ಚಿನ್ನದ ಖನಿಜವಾಗಿದ್ದ ಈ ನದಿಯ ಆಳವು ಯಾರಿಗೂ ಸಿಗದ ಮಾಯಾಜಿಂಕೆಯಾಗಿ ಶತಮಾನಗಳ ಕಾಲ ಎಲ್ಲರ ತಲೆಯನ್ನೂ ಕೆಡಿಸಿತು.
ಮುಯಿಸ್ಕಾ ಜನರು ಇಲ್ಲಿ ನಿಜವಾಗಲೂ ಚಿನ್ನದ ವಸ್ತುಗಳನ್ನ ನದಿಗೆ ಎಸೆಯುತ್ತಿದ್ದರೆ ? ಆ ನದಿಯ ಸುತ್ತ ದೊರೆತು ಸಂರಕ್ಷಣೆಗೊಳಪಟ್ಟ ಕೆಲವಾರು ಚಿನ್ನದ ಆರ್ಟಿಫ್ಯಾಕ್ಟ್ ಗಳು ಹೀಗೊಂದು ಸಂಶಯ ಹುಟ್ಟಿಸಿವೆ. ನದಿಗೆ ಎಸೆಯುವಷ್ಟು ಹಾಗೂ ಚಿನ್ನದ ಧೂಳಿನಿಂದಲೇ ಸ್ನಾನ ಮಾಡುವಷ್ಟು ಪ್ರಮಾಣದ ಚಿನ್ನ ಅವರಿಗೆ ಎಲ್ಲಿ ದೊರೆಯುತ್ತಿದ್ದಿರಬಹುದು? ದಕ್ಷಿಣ ಅಮೇರಿಕಾದ ಒರಿನೋಕೊ (orrinoco) ನದಿಯಿರುವ ನಗರದಲ್ಲಿ ಚಿನ್ನದ ಗಣಿ ಇತ್ತೀಚೆಗೆ ಪತ್ತೆಯಾಗಿದೆ. ಬಹುಶಃ ಇಲ್ಲಿಂದಲೇ ಪುರಾತನ ಜನ ಚಿನ್ನವನ್ನ ಪಡೆಯುತ್ತಿದ್ದಿರಬೇಕೆಂದು ಅಂದಾಜಿಸಲಾಗಿದೆ.
2001 ರಲ್ಲಿ ಉತ್ತರ ಬ್ರೆಜಿಲ್ ಬಳಿ ಪಾರಿಮಾ ನದಿ ಸಹ ಪತ್ತೆಯಾಯ್ತು. ಅದರಲ್ಲು ಸಹ ಅನೇಕ ಪುರಾತನ ಚಿನ್ನದ ನಾಣ್ಯಗಳು ದೊರೆತಿವೆ. 1988 ರಷ್ಟು ಈಚಿನ ಸಂಶೋಧನೆಗಳೂ ಸಹ ದಕ್ಷಿಣ ಅಮೇರಿಕಾದಲ್ಲಿ ಎಲ್ ಡೊರಾಡೊ ನಗರ ಇತ್ತು ಎನ್ನುವ ಬಗ್ಗೆ ನಿಖರ ಪಡಿಸಲಾಗಿಲ್ಲ. ಆದರೆ ದೊರೆತಿರುವ ಕನಿಷ್ಠ ಪ್ರಮಾಣದ ಚಿನ್ನದ ವಸ್ತುಗಳು ಹಾಗೂ ನಾಣ್ಯಗಳು ಎಲ್ ಡೊರಾಡೊ ಬಗ್ಗೆ ಇರುವ ವದಂತಿಗಳನ್ನ ಪುಷ್ಟೀಕರಿಸುತ್ತಿವೆ. ಎಲ್ ಡೊರಾಡೊ ಹುಡುಕಾಟವು ವಿಶ್ವ ಪ್ರಸಿದ್ಧ ಅಮೇಜಾನ್ ನದಿ ಹಾಗೂ ಅಲ್ಲಿನ ಜನ ಜೀವನ ಹಾಗೂ ಸಂಪನ್ಮೂಲಗಳ ಪರಿಚಯಕ್ಕೆ ಕಾರಣವಾಗಿದೆ ಕೂಡ! ಎಲ್ ಡೊರಾಡೊ ಎಂದರೆ ಪುರಾತನ ಸ್ಪಾನಿಷ್ ಭಾಷೆಯಲ್ಲಿ ‘ಚಿನ್ನದ ರಾಜ’ ಅಥವಾ ‘ಚಿನ್ನದ ತಾಣ’ ಎಂದರ್ಥ.
ಇದು ಇಲ್ಲಿನ ಸ್ಥಳೀಯರಿಂದ ಕತೆ ಕೇಳಿ ತಿಳಿದ ಸ್ಪ್ಯಾನಿಷ್ ನಾವಿಕರೆ ಇಟ್ಟ ಹೆಸರು. ಇವರ ಚಿತ್ರಹಿಂಸೆಗೆ ಹೆದರಿದ್ದ ಸ್ಥಳೀಯರಿಂದ ಮುಂದೆ ಎಲ್ ಡೊರಾಡೊ ಬಗ್ಗೆ ಅನೇಕ ಸುಳ್ಳುಗಳೂ ಸಹ ಹುಟ್ಟಿಕೊಂಡಿರುವುದು ಸತ್ಯ. ಅಥವಾ ಪ್ರಾರಂಭಿಕ ಸ್ಪ್ಯಾನಿಷ್ ಯಾತ್ರಿಕರೆ ಇಲ್ಲಿ ಸಿಕ್ಕ ಬಹುಪಾಲು ನಿಧಿಯನ್ನ ನುಣ್ಣಗೆ ಮಾಡಿ ದೋಚಿರುವುದೂ ಸಹ ಅಲ್ಲಗಳೆಯಲಾಗದ ಒಂದು ಸಾಧ್ಯತೆಯೆ ಆಗಿದೆ !
ಕಾಲಾನಂತರದಲ್ಲಿ ಎಲ್ ಡೊರಾಡೊ ಇರುವ ಜಾಗದ ಗುರುತು ಬದಲಾಗುತ್ತಾ ಬಂದಿದ್ದು ‘ಎಲ್ ಡೊರಾಡೊ’ ಎಂದು ಕರೆಯಲಾಗುತ್ತಿದ್ದ ನಗರ ನಿಜಕ್ಕು ಇದ್ದ ಮೂಲ ಸ್ಥಳ ಯಾವುದೆಂಬ ಗೊಂದಲ ಸಹ ಬಗೆಹರಿಯದೆ ಹಾಗೇ ಉಳಿದಿದೆ. ಈಗ ಅಂದರೆ 1965 ರಿಂದ ಕೊಲಂಬಿಯಾದ ಸರ್ಕಾರವು ತನ್ನ ಸುಪರ್ದಿಗೆ ಬರುವ ‘ಗುವಾಟವಿಟ’ ನದಿಯನ್ನ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಿದೆ. ಒಟ್ಟಾರೆ ಈ ಎಲ್ ಡೊರಾಡೊ ಬಿಳಿಯರ ಸ್ವಾರ್ಥ ಹೆಚ್ಚಿಸಿ, ಬುಡಕಟ್ಟು ಜನರ ನೆಮ್ಮದಿ ಸ್ವಾಸ್ಥ್ಯವನ್ನ ಕೆಡಿಸಿದ ಕುಖ್ಯಾತಿ ಹೊಂದಿದ ತಾಣವಾಗಿರುವುದು ಮಾತ್ರ ಸಾರ್ವಕಾಲಿಕ ಸತ್ಯ.
ಸಂಗ್ರಹ ಮತ್ತು ಲೇಖನ :- ಇಂದೂದರ್ ಒಡೆಯರ್ ಚಿತ್ರದುರ್ಗ (ಡುಗ್ಗು)