ಬೆಂಗಳೂರು : ಇಂದು ಬೆಳಗಿನ ಜಾವ ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬೆಳಗ್ಗೆ 5.30ರ ಸುಮಾರಿಗೆ ಆರಂಭವಾದ ಮಳೆ 8 ಗಂಟೆಯವರೆಗೂ ಸುರಿಯಿತು. ಮೈಸೂರು ರಸ್ತೆ, ಕೆಂಗೇರಿ, ಉತ್ತರಹಳ್ಳಿ, ಜಯನಗರ, ಮಲ್ಲೇಶ್ವರಂ, ವಿಜಯನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ವಾಹನಗಳ ಸಂಚಾರ ಅಷ್ಟಿಲ್ಲದೆ ಇದ್ದರು ಅಗತ್ಯ ವಸ್ತುಗಳ ಖರೀದಿಗೆ ಹೋಗುವವರು ಕೂಡ ಪರದಾಡುವಂತಾಗಿತ್ತು.
ಮಳೆಯ ಜೊತೆ ಗಾಳಿ, ಮಿಂಚು, ಗುಡುಗು ಇದ್ದ ಕಾರಣ ಭಾರೀ ಅನಾಹುತವಾಗಿದೆ. ಯಲಹಂಕ- ದೊಡ್ಡಬಳ್ಳಾಪುರ ಹೆದ್ದಾರಿ ಕೂಡ ಮಳೆ ನೀರಿಗೆ ಜಲಾವೃತವಾಗಿದೆ. ಮಳೆ ನೀರಿನಿಂದ ರಸ್ತೆ ಕೆರೆಯಂತಾಗಿದೆ. ಬೊಮ್ಮನಹಳ್ಳಿ ಮನೆಗಳಿಗೆ ನೀರು ನುಗಿದ್ದು, ನಿವಾಸಿಗಳು ನೀರು ಹೊರಹಾಕುವಲ್ಲಿ ನಿರತರಾಗಿದ್ದಾರೆ.
ಕೋಲಾರದಲ್ಲೂ ಅಬ್ಬರಿಸಿಬೊಬ್ಬಿರಿದ ವರುಣ!
ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿನ ವಿವಿಧೆಡೆ ಇಂದು ಮುಂಜಾನೆ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು ಲಕ್ಷಾಂತರ ರೂ ಮೌಲ್ಯದ ತೋಟಗಾರಿಕಾ ಬೆಳೆಗಳು ನಾಶವಾಗಿವೆ.
ಮೇ 1ರವರೆಗೂ ರಾಜ್ಯದಲ್ಲಿ ಮಳೆ!
ಮೇ 1ರವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದ್ದು, ಉತ್ತರ ಒಳನಾಡು, ಕರಾವಳಿ ಪ್ರದೇಶಗಳಲ್ಲಿ ಒಣಹವೆ ಮುಂದುವರೆಯಲಿದೆ.
ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 41.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗುವ ಮುನ್ಸೂಚನೆ ದೊರೆತಿದೆ.
ಮುಂದಿನ48 ಗಂಟೆ ಆಕಾಶ ಮೋಡದಿಂದ ಕೂಡಿರಲಿದೆ, ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಲಿದೆ.