ಬೆಳಗಾವಿ: ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಕೆಡವಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಲು ಕಾರಣರಾದ ಬೆಳಗಾವಿಯ ಸಾಹುಕಾರ ಸಚಿವ ರಮೇಶ್ ಜಾರಕಿಹೊಳಿ, ಮಹಾರಾಷ್ಟ್ರದಲ್ಲೂ ಕರಾಮತ್ತು ತೋರಿಸಲು ಮುಂದಾಗಿದ್ದಾರಾ ಎಂಬ ಮಾತುಗಳು ಬೆಳಗಾವಿಯ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಮಹಾರಾಷ್ಟ್ರದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಕೇಳಿದರೆ ಏನೂ ಇಲ್ಲ, ಏನೂ ಇಲ್ಲ ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಭೇಟಿಯ ಹಿಂದೆ ಮಹಾರಾಷ್ಟ್ರದ ಅಘಾಡಿ ಸರ್ಕಾರದ ಪತನಕ್ಕೆ ಟೈಂಬಾಂಬ್ ಫಿಕ್ಸ್ ಮಾಡಲು ನಡೆಯುತ್ತಿದೆಯಾ ರಾಜಕೀಯ ಲೆಕ್ಕಾಚಾರ ಎನ್ನಲಾಗಿದೆ.
ಈ ಹಿಂದೆಯೂ ಸಹ ದೇವೆಂದ್ರ ಫಡ್ನವೀಸ್ ಭೇಟಿ ಮಾಡಿದ್ದ ರಮೇಶ್ ಜಾರಕಿಹೊಳಿ, ಗುರುವಾರ ಸಹ ತುರ್ತು ಕರೆಯ ಮೇರೆಗೆ ಮುಂಬೈಗೆ ತೆರಳಿ ದೇವೆಂದ್ರ ಫಡ್ನವೀಸ್ ಜತೆ 1 ಗಂಟೆ ಕಾಲ ಚರ್ಚೆ ನಡೆಸಿದ್ದಾರೆ.
ದೇವೆಂದ್ರ ಫಡ್ನವೀಸ್ ಮಧ್ಯಸ್ಥಿಕೆಯಲ್ಲೆ ಬಿಜೆಪಿ ಸೇರಿದ್ದ ರಮೇಶ್ ಜಾರಕಿಹೊಳಿ, ಮಹಾರಾಷ್ಟ್ರದ ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ದೋಸ್ತಿ ಸರ್ಕಾರ ಪತನಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಲು ರೆಡಿಯಾದ್ರಾ ಎಂಬ ಪ್ರಶ್ನೆಗಳು ಎದ್ದಿವೆ.
ಕರ್ನಾಟಕದಲ್ಲಿ ದೋಸ್ತಿ ಸರ್ಕಾರ ಪತನಗೊಳಿಸಿದಂತೆ ಮಹಾರಾಷ್ಟ್ರದ ಅಘಾಡಿ ಸರ್ಕಾರವನ್ನು ಬೀಳಿಸುವ ಶಕ್ತಿ ಬೆಳಗಾವಿಯ ಸಾಹುಕಾರನಿಗೆ ಇದೆಯಾ, ತೆರೆಮರೆಯಲ್ಲಿ ಸರ್ಕಾರ ಪತನಕ್ಕೆ ಕಸರತ್ತು ನಡೆಯುತ್ತಿದೆಯಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.