ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಡೆಪ್ಯುಟಿ ಸಿಟಿ ಎಡಿಟರ್ ಬಿ.ಆರ್.ರೋಹಿತ್ ಬಾವಿಯಲ್ಲಿ ಮುಳುಗಿ ಶನಿವಾರ ಮೃತಪಟ್ಟಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬಿ.ಆರ್.ರೋಹಿತ್ (39) ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿ ವಾಸಿಸುತ್ತಿದ್ದರು. ಶಿವರಾತ್ರಿ ಪ್ರಯುಕ್ತ ಕುಟುಂಬಸ್ಥರ ಜತೆ ಕದಿರೇನಹಳ್ಳಿಯಲ್ಲಿರುವ ಸೋದರ ಮಾವನ ಮನೆಗೆ ಬಂದಿದ್ದಾಗ ಹೊಲದಲ್ಲಿದ್ದ ಬಾವಿಯಲ್ಲಿ ಈಜಾಡುವ ವೇಳೆ ಸುಸ್ತಾಗಿ ಮೃತಪಟ್ಟಿದ್ದಾರೆ.
ಹೊಲದಲ್ಲಿದ್ದ ಬಾವಿಯಲ್ಲಿ ಈಜಾಡಲು ತೆರಳಿದ ರೋಹಿತ್ ಒಬ್ಬರೇ ಬಾವಿಗೆ ಇಳಿದಿದ್ದರು. ಈಜಾಡುವ ವೇಳೆ ಸುಸ್ತಾಗಿ ಈಜಾಡಲು ಆಗುತ್ತಿಲ್ಲ ಎಂದು ಕಿರುಚಾಡಿದ್ದಾರೆ. ಬಾವಿ ದಡದಲ್ಲಿ ಕುಳಿತಿದ್ದವರಿಗೆ ಈಜು ಬಾರದ ಕಾರಣ ಯಾರೂ ನೀರಿಗೆ ಇಳಿದಿಲ್ಲ. ಅಷ್ಟರಲ್ಲಿ ರೋಹಿತ್ ಮೃತಪಟ್ಟಿದ್ದಾರೆ ಎಂದು ಕ್ಯಾತ್ಸಂದ್ರ ಠಾಣೆ ಪೊಲೀಸರು ತಿಳಿಸಿದ್ದಾರೆ.
ರೋಹಿತ್ ತಂದೆ, ತಾಯಿ, ಪತ್ನಿ, ಮಗುವನ್ನು ಆಗಲಿದ್ದು, ರೋಹಿತ್ ಅವರ ಸ್ವಗ್ರಾಮ ಉರ್ಡಿಗೆರೆ ಹೋಬಳಿಯ ಬೇವಿನಹಳ್ಳಿಯಲ್ಲಿ ಭಾನುವಾರ (ಫೆ.23) ಬೆಳಿಗ್ಗೆ 10.30ಕ್ಕೆ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.








