ಬೆಂಗಳೂರು: ಹೌದು, ಇಂದು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಹಾಗೂ ರೆಗ್ಯುಲರ್ ಚೆಕಪ್‍ಗೆಂದು ಹೋಗಲು ತೀರ್ಮಾನಿಸಿದ್ದರೆ ಒಂದು ದಿನದ ಮಟ್ಟಿಗೆ ಮುಂದೂಡುವುದು ಒಳ್ಳೆಯದು. ಯಾಕೆಂದರೆ ಇಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳ ಒಪಿಡಿಗಳು ಬಂದ್ ಆಗಲಿವೆ.
ಇಂದು ಬೆಳಗ್ಗೆ 6ರಿಂದ ಸಂಜೆ 6ರವರಗೆ ಖಾಸಗಿ ಆಸ್ಪತ್ರೆಗಳ ಒಪಿಡಿ ಮತ್ತು ಕ್ಲಿನಿಕ್‍ಗಳಲ್ಲಿ ವೈದ್ಯರ ಸೇವೆ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಹೊಸ ಅಧಿಸೂಚನೆ ವಿರೋಧಿಸಿ ಇಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಒಪಿಡಿ ಬಂದ್‍ಗೆ ಕರೆ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳು ಮಾತ್ರ ಎಂದಿನಂತೆ ತೆರೆಯಲಿವೆ.

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಏಕೆ..?
ಕೇಂದ್ರ ಸರ್ಕಾರದ ಹೊಸ ನಿಯಮಗಳಂತೆ ಇನ್ಮುಂದೆ ಆಯುಷ್ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ನೋಟಿಫಿಕೇಶನ್‍ನಲ್ಲಿ ಈ ವರ್ಷದ ಪಿಜಿ ಕೋರ್ಸ್‍ಗಳಲ್ಲಿ 39 ಜನರಲ್ ಸರ್ಜರಿ ಮತ್ತು 19 ಸ್ಪೆಷಲ್ ಸರ್ಜರಿ ತರಬೇತಿಗೆ ಅವಕಾಶ ಮಾಡಿಕೊಡಲಾಗಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್‍ನ ನಿರ್ಧಾರದಿಂದ ಅಲೋಪತಿ ವೃತ್ತಿಯು ಕಷ್ಟಕ್ಕೆ ಸಿಲುಕಿದೆ ಅನ್ನೋದು ವೈದ್ಯರ ಅಭಿಪ್ರಾಯವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ರೋಗಿಗಳಿಗೂ ಸಮಸ್ಯೆ ಆಗಲಿದೆ ಅನ್ನೋದು ವೈದ್ಯರ ಆತಂಕ.

ಐಎಂಎ ಕರೆದಿರುವ ಬಂದ್‍ಗೆ ಅನೇಕ ಆಸ್ಪತ್ರೆಗಳು ನೈತಿಕ ಬೆಂಬಲ ನೀಡವೆ. ಬಹುತೇಕ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಈಗಾಗಲೇ ವೈದ್ಯರ ಭೇಟಿಗೆ ಅಪಾಯಿಂಟ್‍ಮೆಂಟ್ ಫಿಕ್ಸ್ ಮಾಡಿಕೊಂಡ ರೋಗಿಗಳಿಗೆ ನಿಗದಿಯಂತೆ ವೈದ್ಯರ ಸೇವೆ ಲಭ್ಯವಾಗಲಿದೆ. fortis, apollo, ಎಂ.ಎಸ್ ರಾಮಯ್ಯ, ಸಾಗರ್ ಆಸ್ಪತ್ರೆಯಂತಹ ದೊಡ್ಡ ಆಸ್ಪತ್ರೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ತುರ್ತು ಸೇವೆ(ಎಮರ್ಜೆನ್ಸಿ) ಮತ್ತು ಕೋವಿಡ್ ಸೇವೆ ಎಂದಿನಂತೆ ಇರಲಿದೆ. ಆದರೆ ಕೆಮ್ಮು, ನೆಗಡಿ, ಜ್ವರ, ರೆಗ್ಯೂಲರ್ ಚೆಕಪ್‍ಗೆಂದು ಆಸ್ಪತ್ರೆಗಳಿಗೆ ಹೋಗುವವರಿಗೆ ಓಪಿಡಿ ಸೇವೆ ಸಿಗಲ್ಲ.
ಮತ್ತೊಂದ್ ಬಂದ್‍ನ ಬಿಸಿ
ಸತತ ಬಂದ್, ಪ್ರತಿಭಟನೆ, ಮುಷ್ಕರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಇಂದು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ರೋಗಿಗಳಿಗೆ ಬಿಸಿ ಮುಟ್ಟಿಸಲಿದೆ.
ಮರಾಠ ಪ್ರಾಧಿಕಾರ ವಿರುದ್ಧ ಕಳೆದ ಶನಿವಾರ ನಡೆದ ಕರ್ನಾಟಕ ಬಂದ್, ಕೃಷಿ ಕಾಯ್ದೆ ವಿರುದ್ಧ ಮಂಗಳವಾರ ಆದ ಭಾರತ್ ಬಂದ್, ಬುಧವಾರ ರೈತರ ವಿಧಾನಸೌಧ ಚಲೋ, ಗುರುವಾರ ಸಾರಿಗೆ ನೌಕರರ ಕಾಲ್ನಡಿಗೆ ಜಾಥಾ..ಹೀಗೆ ಸಾಲು ಸಾಲು ಬಂದ್, ಪ್ರತಿಭಟನೆಗಳಿಂದ ಕರ್ನಾಟಕ ಅದರಲ್ಲೂ, ರಾಜಧಾನಿ ಬೆಂಗಳೂರಿನ ನಾಗರಿಕರು ಹೈರಾಣಾಗಿ ಹೋಗಿದ್ದಾರೆ.
ಸರ್ಕಾರಿ ವೈದ್ಯರ ರಜೆ ರದ್ದು
ಖಾಸಗಿ ವೈದ್ಯರು ಒಪಿಡಿ ಬಂದ್ ಮಾಡಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ, ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ರಜೆ ರದ್ದು ಮಾಡಿದೆ. ಕಡ್ಡಾಯವಾಗಿ ಸೇವೆಗೆ ಬರುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







