ಇಂದಿನ ಐಕಾನ್ – ರಾಮಮಂದಿರದ ಕನವರಿಕೆಯಲಿ ಕೊನೆ ಉಸಿರೆಳೆದ ಅಶೋಕ್ ಸಿಂಘಾಲ್
2020 ಆಗಸ್ಟ್ ಐದರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮ ಮಂದಿರದ ಭೂಮಿ ಪೂಜನ ಕಾರ್ಯಕ್ರಮವು ನಡೆಯುವ ಸಂದರ್ಭದಲ್ಲಿ ರಾಷ್ಟ್ರವು ಓರ್ವ ಶ್ರೇಷ್ಟ ವ್ಯಕ್ತಿಯನ್ನು ನೆನಪು ಮಾಡದಿರಲು ಸಾಧ್ಯವೇ ಇಲ್ಲ! ಇಡೀ ಭಾರತಕ್ಕೆ ರಾಮ ಮಂದಿರದ ಕನಸು ಹಂಚಿದವರು ಅವರು! ಅವರೇ ವಿಶ್ವ ಹಿಂದೂ ಪರಿಷತ್ತಿನ ಮಹಾ ನಾಯಕ ಅಶೋಕ್ ಸಿಂಘಾಲ್!
ಅವರು ಹುಟ್ಟಿದ್ದು ಆಗ್ರಾದಲ್ಲಿ ( 27 ಸೆಪ್ಟೆಂಬರ್, 1926). ಅವರ ತಂದೆ ಓರ್ವ ಸರಕಾರಿ ಅಧಿಕಾರಿ ಆಗಿದ್ದರು. ಅವರ ಅಣ್ಣ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಡಿಜಿಪಿ ಆಗಿದ್ದರು. ಅಶೋಕ್ ಸಿಂಘಾಲ್ ಓದಿದ್ದು ಲೋಹ ಶಾಸ್ತ್ರದಲ್ಲಿ BE ಪದವಿ. ಬನಾರಸ್ ವಿವಿಯಿಂದ ಅವರು ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿ ಪದವಿ ಪಡೆದು ಹೊರಬಂದವರು.
ಅವರ ತಂದೆಗೆ ಮಗ ಸರಕಾರಿ ಹುದ್ದೆಗೆ ಸೇರಲಿ ಎಂದು ಆಸೆ. ಆದರೆ ತನ್ನ 16ನೆಯ ವಯಸ್ಸಿನಿಂದ ಆರೆಸಸ್ ಶಾಖೆಗೆ ಹೋಗಲು ಆರಂಭಿಸಿದ್ದ ಹುಡುಗನಿಗೆ ರಾಷ್ಟ್ರದ ಚಿಂತನೆ! ರಾಷ್ಟ್ರದ ಸೇವೆಗೆ ಹವಿಸ್ಸು ಆಗುವ ಸಂಕಲ್ಪ. ಅದಕ್ಕೆ ಅವರು ಸರಕಾರಿ ಕೆಲಸವನ್ನು ಧಿಕ್ಕರಿಸಿ ಆರೆಸಸಿನ ಪೂರ್ಣಕಾಲಿಕ ಪ್ರಚಾರಕ ಆದರು.
ಪ್ರಚಾರಕರ ಬದುಕು ಅಂದರೆ ಒಂದು ರೀತಿ ಪರಿವ್ರಾಜಕ ಸಂತನಂತೆ! ಅವರಿಗೆ ಇಡೀ ಭಾರತವೇ ಮನೆ. ಊಟ ತಿಂಡಿಗಳ ಪರಿವೆ ಇರುವುದಿಲ್ಲ. ಹಾಗೆ ದೆಹಲಿ, ಉತ್ತರಪ್ರದೇಶ, ಹರ್ಯಾಣ ರಾಜ್ಯಗಳ ಉಸ್ತುವಾರಿಯನ್ನು ತೆಗೆದುಕೊಂಡು ಅವರು ನಿತ್ಯಸಂಚಾರ ಮಾಡಿದರು. ರಾಷ್ಟ್ರಧರ್ಮ ಬೋಧನೆ ಮಾಡಿದರು.
1980ರಲ್ಲಿ ಅವರು ವಿಶ್ವ ಹಿಂದೂ ಪರಿಷತ್ ಸೇವೆಗೆ ಸೇರಿದರು. ಆರಂಭದಲ್ಲಿ ಜೊತೆ ಕಾರ್ಯದರ್ಶಿ, ನಂತರ ಪ್ರಧಾನ ಕಾರ್ಯದರ್ಶಿ, 1991ರಿಂದ ಕಾರ್ಯಾಧ್ಯಕ್ಷರಾಗಿ ನೇಮಕ ಗೊಂಡರು. ಮುಂದಿನ 20 ವರ್ಷಗಳ ಕಾಲ ಅವರು ವಿಶ್ವ ಮಟ್ಟದ ಹಿಂದೂ ನಾಯಕರಾಗಿ ಸಂಸ್ಥೆಗೆ ಮಾರ್ಗದರ್ಶನ ಮಾಡಿದರು. ಸಂಸ್ಥೆಯನ್ನು ಆಲದ ಮರವಾಗಿ ಬೆಳೆಸಿದರು.
ಅವರ ಅವಧಿಯಲ್ಲಿ ನಡೆದ ಕೆಲವು ಮಹತ್ವದ ಘಟನೆಯನ್ನು ನಾನು ಇಲ್ಲಿ ಬರೆಯಬೇಕು. 1981ರಲ್ಲಿ ತಮಿಳುನಾಡಿನ ತಿರುವನ್ವೇಲೀ ಜಿಲ್ಲೆಯ ಮೀನಾಕ್ಷಿಪುರಂ ಎಂಬಲ್ಲಿ 1100 ದಲಿತರು ಹಣದ ಆಮಿಷಕ್ಕೆ ಬಲಿ ಆಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದರು. ಈ ಘಟನೆ ಅಶೋಕ್ ಸಿಂಘಾಲ್ ಅವರನ್ನು ತೀವ್ರವಾಗಿ ಕಾಡಿತು. ದಲಿತರನ್ನು ಮೇಲ್ಜಾತಿಯವರು ಕೆಟ್ಟದಾಗಿ ನಡೆಸಿಕೊಳ್ಳುವ ಕೀಳು ಸಂಸ್ಕೃತಿಯನ್ನು ಅವರು ಬಲವಾಗಿ ಖಂಡಿಸಿದರು. ಮಾತ್ರವಲ್ಲ ದಲಿತ ಬಂಧುಗಳಲ್ಲಿ ಸ್ವಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ದಲಿತರಿಗಾಗಿ 200 ಮಂದಿರಗಳನ್ನು ಸ್ಥಾಪಿಸಿತು. ಇದರಿಂದ ಮತಾಂತರ ಕಡಿಮೆ ಆದದ್ದು ಮಾತ್ರವಲ್ಲ, ಮೀನಾಕ್ಷಿಪುರಂನಲ್ಲಿ ಮತಾಂತರ ಆದ 900 ದಲಿತರು ಮರಳಿ ಹಿಂದೂ ಧರ್ಮಕ್ಕೆ ಮರಳಿದರು!
ಅವರ ನಾಯಕತ್ವದಲ್ಲಿ VHP ಮೊದಲ ಬಾರಿಗೆ ಸಂತರ ಸಮ್ಮೇಳನ( ಧರ್ಮ ಸಂಸತ್ತು) ಆಯೋಜಿಸಿತ್ತು. 1984ರಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಈ ಮೊದಲ ಧರ್ಮ ಸಂಸತ್ತು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಸ್ಥಾಪಿಸುವ ಐತಿಹಾಸಿಕ ನಿರ್ಣಯವನ್ನು ಸ್ವೀಕಾರ ಮಾಡಿತು. ರಾಮ ಮಂದಿರ ನಿರ್ಮಾಣಕ್ಕೆ ಹಿಂದೆ ನೂರಾರು ಹೋರಾಟಗಳು ನಡೆದಿದ್ದರೂ ಅಂದು ತೆಗೆದುಕೊಂಡ ನಿರ್ಣಯವು ಮಂದಿರದ ಸ್ಥಾಪನೆಗೆ ಹೊಸ ದಿಕ್ಕನ್ನು ತೋರಿಸಿತು! ಅಲ್ಲಿಂದ ಅಶೋಕ್ ಸಿಂಘಾಲ್ ಅವರು ಒಂದು ದಿನವೂ ವಿಶ್ರಾಂತಿ ಪಡೆಯದೆ ರಾಮ ಮಂದಿರದ ಕನಸನ್ನು ಇಡೀ ಭಾರತಕ್ಕೆ ಹಂಚಲು ಹೊರಟು ನಿಂತರು!
ದೇಶದ ಹಳ್ಳಿ ಹಳ್ಳಿಗಳಲ್ಲಿ ‘ಶ್ರೀ ರಾಮರಥ’ವು ಚಲಿಸಿತು. ಪ್ರತೀ ಗ್ರಾಮಗಳಲ್ಲಿ ‘ ಶ್ರೀ ರಾಮ ಶಿಲಾ ಪೂಜನ’ ಕಾರ್ಯಕ್ರಮ ಚಂದವಾಗಿ ನಡೆಯಿತು. ಇಡೀ ಭಾರತದಲ್ಲಿ ಮಂದಿರದ ಬಗ್ಗೆ ಜಾಗೃತಿ ಮೂಡಿತು. 1990ರಲ್ಲಿ ಪ್ರಮುಖ ಮಂದಿರಗಳ ವಿನ್ಯಾಸಗಾರ ಆದ ಚಂದ್ರಕಾಂತ ಸೋಮಾಪುರ ಅವರನ್ನು ಮಂದಿರದ ಸ್ಥಳಕ್ಕೆ ಕರೆದು ಕೊಂಡು ಹೋಗಿ ಮಂದಿರದ ನೀಲನಕ್ಷೆಯನ್ನು ಸಿದ್ಧಮಾಡಿಸಿ, ಅದಕ್ಕೆ ಸಂತರ ಮಂಡಳಿಯಿಂದ ಅಂಗೀಕಾರ ಪಡೆದರು.
1990 ಸೆಪ್ಟೆಂಬರ್ ತಿಂಗಳಲ್ಲಿ ಗುಜರಾತಿನ ಸೋಮನಾಥ್ ಮಂದಿರದಿಂದ ಹೊರಟ ಅಡ್ವಾಣಿ ನೇತೃತ್ವದ ರಥಯಾತ್ರೆಗೆ ಸಿಂಘಾಲ್ ಕೂಡ ಹೆಗಲು ಕೊಟ್ಟರು. ಸಾವಿರಾರು ಕರಸೇವಕರ ಪಡೆಯನ್ನು ಕಟ್ಟಿದರು. ಜಗತ್ತಿನ ಯಾವ ಶಕ್ತಿಯೂ ರಾಮಮಂದಿರದ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಗಟ್ಟಿಯಾಗಿ ಗುಡುಗಿದರು. ಮಂದಿರ ನಿರ್ಮಾಣವನ್ನು ತಡೆದರೆ ಸರಕಾರಗಳು ಉರುಳುವುದು ಖಂಡಿತ ಎಂದು ಘರ್ಜನೆ ಮಾಡಿದರು. “ಮಂದಿರ ವಹೀ ಬನಾಯೆಂಗೆ” ಘೋಷಣೆಯು ಮುಗಿಲು ಮುಟ್ಟಿತು!
ವರ್ಷಗಟ್ಟಲೆ ರಾಮ ಜನ್ಮ ಭೂಮಿಯ ವ್ಯಾಜ್ಯಗಳು ಕೋರ್ಟಿನಿಂದ ಕೋರ್ಟಿಗೆ ವರ್ಗಾವಣೆ ಆಗಿ ಪರಿಹಾರ ದೊರೆಯದೆ ಹೋದಾಗ ತುಂಬಾ ತಾಳ್ಮೆಯಿಂದ ಕಾದರು. ಉಭಯ ಮಾತುಕತೆಗಳ ಮೂಲಕ ವಿವಾದವನ್ನು ಪರಿಹಾರ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡಿದರು.
ಮುಂದೆ ರಚನೆ ಆದ ಸರಕಾರಗಳು ರಾಮಮಂದಿರದ ಅಜೆಂಡಾವನ್ನು ಮರೆತು ವರ್ತಿಸಿದಾಗ ಆಮರಣಾಂತ ಉಪವಾಸ ಕೂತರು. ಕೊನೆಯ ಉಸಿರಿನ ವರೆಗೂ ರಾಮ ಮಂದಿರ ಬಿಟ್ಟರೆ ಬೇರೇನೂ ಯೋಚನೆ ಮಾಡಲಿಲ್ಲ. ರಾಮ ಮಂದಿರದ ಕನವರಿಕೆಯಲ್ಲೇ 2015ರ ನವೆಂಬರ್ 17ರಂದು ಅಶೋಕ್ ಸಿಂಘಾಲ್ ಅವರು ತಮ್ಮ ಕೊನೆಯುಸಿರೆಳೆದರು. ಅವರ ಬದುಕಿನ ಆಧಾರಿತವಾದ ಪುಸ್ತಕ ” ಹಿಂದೂತ್ವ ಕೆ ಪುರೋಧಾ” ಹೋರಾಟದ ಪುಟಗಳನ್ನು ನಮಗೆ ಪರಿಚಯ ಮಾಡುತ್ತದೆ.
ಅವರ ಕೊಡುಗೆಯನ್ನು ಭಾರತ ಸರಕಾರ ಮರೆಯಲಿಲ್ಲ. ಆಗಸ್ಟ್ ಐದರಂದು ನಡೆಯುವ ಶ್ರೀ ರಾಮ ಮಂದಿರದ ಭೂಮಿ ಪೂಜನ ಕಾರ್ಯಕ್ರಮಕ್ಕೆ ಸಿಂಘಾಲ್ ಅವರ ಅಣ್ಣನ ಮಗ ಸಲೀಲ್ ಸೇಹೆಗಲ್ ಅವರನ್ನು ಪತ್ನಿ ಸಮೇತ ಮಂದಿರ ನಿರ್ಮಾಣ ಟ್ರಸ್ಟ್ ಗೌರವದಿಂದ ಆಮಂತ್ರಿಸಿದೆ. ದಂಪತಿಗಳು ಪ್ರಧಾನಿ ಮೋದಿಯವರ ಪಕ್ಕದಲ್ಲಿ ಕುಳಿತು ಧಾರ್ಮಿಕ ಕಾರ್ಯಗಳಲ್ಲಿ ಸಹಭಾಗಿ ಆಗಲಿದ್ದಾರೆ! ಆ ಮೂಲಕ ಅಶೋಕ್ ಸಿಂಘಾಲ್ ಅವರು ಆತ್ಮಶರೀರಿಯಾಗಿ ನಿಂತು ರಾಮ ಮಂದಿರವನ್ನು ನೋಡಲಿದ್ದಾರೆ.
☑ ರಾಜೇಂದ್ರ ಭಟ್ ಕೆ.