ಟೋಕಿಯೋ ಒಲಿಂಪಿಕ್ಸ್ -ಕರ್ನಾಟಕದಿಂದ ಕೇವಲ ಮೂರು ಸ್ಪರ್ಧಿಗಳು.. ಪದಕ ಗೆದ್ರೆ ಬಿಎಸ್ ವೈ ಸರ್ಕಾರದಿಂದ ಕೋಟಿ ಕೋಟಿ ದುಡ್ಡು…!
ಟೋಕಿಯೋ ಒಲಿಂಪಿಕ್ಸ್ 2021 – ಹೌದು, ಮತ್ತೊಂದು ಒಲಿಂಪಿಕ್ಸ್ ಬಂದಿದೆ. ವಿಶ್ವದ ಮಹಾ ಕ್ರೀಡಾ ಜಾತ್ರೆಯಲ್ಲಿ ಪದಕ ಗೆಲ್ಲಲು ಸಾವಿರಾರು ಕ್ರೀಡಾಪಟುಗಳು ಕನಸು ಕಾಣುತ್ತಿದ್ದಾರೆ. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು ಕೂಡ. ಅಮೆರಿಕಾ, ಚೀನಾ, ರಷ್ಯಾದಂತಹ ದೊಡ್ಡ ರಾಷ್ಟ್ರಗಳ ಜೊತೆ ಸಣ್ಣ ಸಣ್ಣ ರಾಷ್ಟ್ರಗಳು ಕೂಡ ಪದಕದ ರೇಸ್ ನಲ್ಲಿ ಪೈಪೋಟಿ ಒಡುತ್ತಿವೆ.
ಆದ್ರೆ 130 ಕೋಟಿ ಜನ ಸಂಖ್ಯೆ ಹೊಂದಿರುವ ವಿಶ್ವದ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಒಂದು ಪದಕ ಸಿಕ್ಕಿದ್ರೆ ಅದೇ ದೊಡ್ಡ ಸಾಧನೆಯಾಗಿದೆ. ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದಕ್ಕಿಂತ ಸ್ಪರ್ಧಿಸುವುದೇ ದೊಡ್ಡ ಸಾಧನೆಯಾಗಿದೆ. ಆದ್ರೂ ಕಳೆದ ನಾಲ್ಕೈದು ಒಲಿಂಪಿಕ್ ಗೇಮ್ಸ್ ಗಳಲ್ಲಿ ಭಾರತದ ಸಾಧನೆ ಸ್ವಲ್ಪ ಮಟ್ಟಿನ ಸಮಾಧಾನವನ್ನು ತಂದಿರುವುದಂತೂ ಸುಳ್ಳಲ್ಲ. ಜೊತೆಗೆ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಬಹುದು ಅನ್ನೋ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಅದೇನೇ ಇರಲಿ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ತಯಾರಿಗೆ ಕೋವಿಡ್ -19 ಸೋಂಕು ಅಡ್ಡಿಯನ್ನುಂಟು ಮಾಡಿದೆ. ಇದು ವಿಶ್ವದ ಎಲ್ಲ ಕ್ರೀಡಾಪಟುಗಳು ಕೂಡ ಈ ತೊಂದರೆಯನ್ನು ಅನುಭವಿಸಿದ್ದಾರೆ.
ಆದ್ರೆ ಭಾರತದಲ್ಲಿ ಒಲಿಂಪಿಕ್ಸ್ ತಯಾರಿ ಹೇಗೆ ನಡೆಯುತ್ತೆ ? ಈ ಪ್ರಶ್ನೆಗೆ ಉತ್ತರ ತುಂಬಾನೇ ಸುಲಭವಾಗಿದೆ. ಅಮೆರಿಕಾ, ಚೀನಾದಂತಹ ರಾಷ್ಟ್ರಗಳಲ್ಲಿ ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ಚಿಕ್ಕ ವಯಸ್ಸಿನಲ್ಲೇ ಅವರ ಪ್ರತಿಭೆಯನ್ನು ಗುರುತಿಸಿ ತರಬೇತಿಯನ್ನು ನೀಡಲಾಗುತ್ತಿದೆ. ಆದ್ರೆ ನಮ್ಮ ದೇಶದಲ್ಲಿ ಕ್ರೀಡಾಪಟು ಒಬ್ಬ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಆತನಿಗೆ ತರಬೇತಿಯನ್ನು ನೀಡಲಾಗುತ್ತದೆ. ಬಳಿಕ ಆತ Aditi Ashokಭಾರತವನ್ನು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ ಪದಕ ಗೆದ್ರೆ ಸರ್ಕಾರದಿಂದ ನಗದು ಬಹುಮಾನಗಳು ಸಿಗುತ್ತವೆ. ಇಲ್ಲ ಅಂದ್ರೆ ನಯಾ ಪೈಸೆಯೂ ಸಿಗಲ್ಲ. ಇನ್ನು ಸರ್ಕಾರದಿಂದ ಘೋಷಣೆಯಾದ ನಗದು ಬಹುಮಾನ ಯಾವಾಗ ಕೈ ಸೇರುತ್ತೆ ಅಂತ ಗೊತ್ತಿಲ್ಲ. ಸಿಕ್ರೆ ಸಿಕ್ತ್ ಇಲ್ಲ ಅಂದ್ರೆ ಇಲ್ಲ ಅಷ್ಟೇ..
ಇದೀಗ ಕರ್ನಾಟಕ ಸರ್ಕಾರದಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರಿಗೆ ಕೋಟಿ ಕೋಟಿ ಲೆಕ್ಕಚಾರದಲ್ಲಿ ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ.
ಚಿನ್ನದ ಪದಕ ಗೆದ್ದವರಿಗೆ ಐದು ಕೋಟಿ, ಬೆಳ್ಳಿ ಪದಕ ಗೆದ್ದವರಿಗೆ ಮೂರು ಕೋಟಿ, ಕಂಚು ಗೆದ್ದವರಿಗೆ ಎರಡು ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದಾರೆ.
ಆದ್ರೆ 2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತದ ಸ್ಪರ್ಧಿಗಳಲ್ಲಿ ಕರ್ನಾಟಕದವರು ಇರೋದು ಬರೀ ಮೂರು ಮಂದಿ ಮಾತ್ರ.
ಈ ಮೂವರಿಗೂ ಪದಕ ಗೆಲ್ಲೋದು ಅಷ್ಟೊಂದು ಸುಲಭವಿಲ್ಲ. ಒಂದು ವೇಳೆ ಗೆದ್ರೆ ಅದು ಅತ್ಯಬ್ಧುತ ಸಾಧನೆಯಾಗಲಿದೆ. ಹಾಗೇ ಪದಕ ಗೆಲ್ಲಲಿ ಎಂಬುದೇ ನಮ್ಮ ಹಾರೈಕೆಯೂ ಹೌದು, ಆಶಯವೂ ಹೌದು.
ಆದ್ರೆ ಪ್ರಶ್ನೆ ಅದಲ್ಲ. ಈ ನಗದು ಬಹುಮಾನ, ಸನ್ಮಾನ ಒಲಿಂಪಿಕ್ಸ್ ಟೂರ್ನಿಗೆ ಹೋಗುವ ಮುನ್ನ ಬೇಕಾಗಿರಲಿಲ್ಲ. ಅದರ ಬದಲು ಅವರು ಕಷ್ಟಪಟ್ಟು ಅಭ್ಯಾಸ ನಡೆಸುತ್ತರಲ್ವಾ ಆಗ ಸಿಕ್ಕಿದ್ರೆ ಎಷ್ಟೋ ಸಹಾಯವಾಗುತ್ತಿತ್ತು.
ಬಹುಶಃ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಕರ್ನಾಟಕದಿಂದ ಕಡಿಮೆ ಸಂಖ್ಯೆಯ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನ ಈಜು ಸ್ಪರ್ಧೆಯಲ್ಲಿ ಕರ್ನಾಟಕದಿಂದ ಶ್ರೀಹರಿ ನಟರಾಜನ್, ಈಕ್ವೇಸ್ಟ್ರಿಯನ್ ನಲ್ಲಿ ಫೌದ್ ಮಿರ್ಜಾ ಹಾಗೂ ಗಾಲ್ಪ್ ನಲ್ಲಿ ಆದಿತಿ ಅಶೋಕ್ ಅವರು ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ. ಈ ಮೂವರಿಗೂ ಕರ್ನಾಟಕದ ಸರ್ಕಾರದಿಂದ ಸನ್ಮಾನ ಸಿಕ್ಕಿದ್ದು, 10 ಲಕ್ಷ ರೂಪಾಯಿ ನಗದು ಬಹುಮಾನವೂ ಸಿಕ್ಕಿದೆ. ಇದು ಒಳ್ಳೆಯದ್ದೇ. ಆದ್ರೆ ಈ ಹಣ ಅವರ ತರಬೇತಿ ಅವಧಿಯಲ್ಲಿ ಸಿಗುತ್ತಿದ್ರೆ ಇನ್ನೂ ಒಳ್ಳೆಯದಾಗುತ್ತಿತ್ತು.
ಈ ನಡುವೆ, ಹಾಕಿ ಮತ್ತು ಅಥ್ಲೆಟಿಕ್ಸ್ ನಲ್ಲಿ ಯಾವೊಬ್ಬ ಸ್ಪರ್ಧಿಯೂ ಕರ್ನಾಟಕದಿಂದ ಆಯ್ಕೆಯಾಗಿಲ್ಲ.
ಒಟ್ಟಿನಲ್ಲಿ ಕರ್ನಾಟಕದಿಂದ ಪದಕ ಗೆಲ್ಲುವ ಭರವಸೆಯಂತೂ ಇಲ್ಲ. ಹೀಗಾಗಿಯೇ ಸಿಎಂ ಬಿಎಸ್ ವೈ ಧೈರ್ಯದಿಂದಲೇ ಕೋಟಿ ಕೋಟಿ ಲೆಕ್ಕಚಾರದಲ್ಲಿ ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಏನೇ ಆಗ್ಲಿ, ಈ ಮೂವರು ಸ್ಪರ್ಧಿಗಳಾದ್ರೂ ಕರ್ನಾಟಕದ ಮರ್ಯಾದೆ ಉಳಿಸಿದ್ದಾರೆ. ಈ ಮೂವರು ಸ್ಪರ್ಧಿಗಳಿಗೂ ಆಲ್ ದಿ ಬೆಸ್ಟ್..