ಗಾಯದಿಂದ ಹಿಮಾದಾಸ್ ಒಲಿಂಪಿಕ್ಸ್ ಕನಸು ಭಗ್ನ – ಹಿಮಾದಾಸ್‍ಗೆ ಆತ್ಮಸ್ಥೈರ್ಯ ತುಂಬಿದ ಕೇಂದ್ರ ಕ್ರೀಡಾ ಸಚಿವ
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಹಿಮಾದಾಸ್ ಅವರ ಕನಸು ಭಗ್ನಗೊಂಡಿದೆ. ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಮಾದಾಸ್ ಹಿಂದೆ ಸರಿಯುವಂತವಾಗಿದೆ.
ನಿರಾಸೆಗೊಂಡಿರುವ ಹಿಮದಾಸ್ ಗೆ ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜು ಅವರು ಸಮಾಧಾನಪಡಿಸಿದ್ದಾರೆ.
ಕ್ರೀಡಾಪಟುಗಳಿಗೆ ಗಾಯ ಜೀವನದ ಒಂದು ಭಾಗವಾಗಿದೆ. ಹಾಗಂತ ನಿರಾಸೆಪಡುವ ಅಗತ್ಯವಿಲ್ಲ. 2022ರ ಏಷ್ಯನ್ ಗೇಮ್ಸ್ ಮತ್ತು 2022ರ ಕಾಮನ್ ವೆಲ್ತ್ ಗೇಮ್ಸ್ ಗೆ ತಯಾರಿ ಮಾಡಿಕೊಳ್ಳಿ. ನಾನು ಹಿಮಾ ದಾಸ್ ಜೊತೆ ಮಾತನಾಡಿ ಆಕೆಗೆ ಸಮಾಧಾನಪಡಿಸಿದ್ದೇನೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜು ಅವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
21ರ ಹರೆಯದ ಹಿಮಾದಾಸ್ ಅವರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಅಂತರ ರಾಜ್ಯ ಕ್ರೀಡಾಕೂಟದ 100 ಮೀಟರ್ ಮತ್ತು 4/100 ಮೀಟರ್ ರಿಲೆ ಸ್ಪರ್ಧೆಯ ಫೈನಲ್ ನಲ್ಲಿ ಹಿಮಾ ದಾಸ್ ಓಡಲಿಲ್ಲ. ಆದ್ರೆ ಹಿಮಾ ದಾಸ್ ಅವರು 200 ಮೀಟರ್ ಓಟದ ಫೈನಲ್ ನಲ್ಲಿ ಸ್ಪರ್ಧಿಸಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದರು. ಹೀಗಾಗಿ ಹಿಮಾ ದಾಸ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
2018ರ ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ ಸ್ಪರ್ಧೆಯ 400 ಮೀಟರ್ ಓಟದಲ್ಲಿ ಹಿಮಾದಾಸ್ ಅವರು ಚಿನ್ನದ ನಗೆ ಬೀರಿದ್ದರು. ಅಲ್ಲದೆ 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಹಾಗೂ 4/100 ಮೀಟರ್ ರಿಲೆ ಮತ್ತು 4/400 ಮೀಟರ್ ರಿಲೆಯಲ್ಲಿ ಚಿನ್ನ ಗೆದ್ದುಕೊಂಡಿದ್ದರು.
ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕು. ಪದಕ ಗೆಲ್ಲಬೇಕು ಎಂಬುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು. ಹಾಗೇ ಹಿಮಾದಾಸ್ ಕೂಡ ಕನಸು ಕಾಣುತ್ತಿದ್ದರು. ಆದ್ರೆ ಈಗ ಹಿಮಾದಾಸ್ ಅವರ ಕನಸು ಭಗ್ನಗೊಂಡಿದೆ.