ನಾಳೆ ಡಿಕೆಶಿ ಪದಗ್ರಹಣ; ಕಾರ್ಯಕರ್ತರಿಗಾಗಿ ಸಮಾರಂಭದ ನೇರಪ್ರಸಾರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿ ನಾಲ್ಕು ತಿಂಗಳ ಬಳಿಕ ಡಿ.ಕೆ ಶಿವಕುಮಾರ್ ನಾಳೆ(ಗುರುವಾರ) ಪದಗ್ರಹಣ ಮಾಡಲಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕೇವಲ 150 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕರ್ನಾಟಕದ ಹೊರಗಿನಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೇರಳದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಾಲ್, ಕೇರಳ ಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಸೀಮಾಂಧ್ರದ ಸಾಕೆ ಶೈಲಜನಾಥ್, ಉತ್ತಮ್ ಕುಮಾರ್ ರೆಡ್ಡಿ ನಾಳೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ 4 ತಿಂಗಳ ಹಿಂದೆಯೇ ಡಿ.ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿತ್ತು. ಅದೇ ವೇಳೆ ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾದ ಕಾರಣದಿಂದ ಅಧಿಕಾರ ಸ್ವೀಕಾರ ಸಮಾರಂಭ ನಡೆಸಲು ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಸಮಾರಂಭವನ್ನು ಮೂರು ಬಾರಿ ಮುಂದೂಡಿಕೆ ಮಾಡಲಾಗಿತ್ತು.

7800 ಕಡೆ ನೇರ ಪ್ರಸಾರ
ಕೊನೆಗೂ ನಾಳೆ ಡಿ.ಕೆ ಶಿವಕುಮಾರ್ ಪದಗ್ರಹಣಕ್ಕೆ ಅಧಿಕೃತ ಮುಹೂರ್ತ ಫಿಕ್ಸ್ ಆಗಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ 150 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಹೀಗಾಗಿ ಕೇವಲ ಹಿರಿಯ ಮುಖಂಡರಿಗಷ್ಟೇ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯಕರ್ತರು, ಬೆಂಬಲಿಗರಿಗೆ ಪ್ರವೇಶವಿಲ್ಲ.
ಈ ಸಂಬಂಧ ಈಗಾಗಲೇ ಡಿಕೆಶಿ ಕೂಡ ಹೆಚ್ಚು ಜನರು ಬರದಂತೆ ಮನವಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರವನ್ನು 7800 ಜಿಲ್ಲಾ, ತಾಲೂಕು ಹಾಗೂ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ಕುಳಿತು ಕಾರ್ಯಕರ್ತರು ನೋಡಲು ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This