ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಗಳ ನೌಕರರು ನಾಳೆ ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ.
ಹೀಗಾಗಿ ನಾಳೆ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಬಸ್‍ಗಳು ರಸ್ತೆಗಿಳಿಯುವುದು ಅನುಮಾನವಾಗಿದೆ. ಬಸ್‍ಗಾಗಿ ಬಸ್ ನಿಲ್ದಾಣಕ್ಕೆ ಹೋಗುವ ಮುನ್ನ ಜನರು 10 ಬಾರಿ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಜನರು ಸರ್ಕಾರಿ ಬಸ್‍ಗಳ ಮೂಲಕ ಪ್ರಯಾಣಿಸುವ ಪ್ಲಾನ್ ಹಾಕಿಕೊಂಡಿದ್ದರೆ ಮುಂದೂಡುವುದು ಒಳ್ಳೆಯದು.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಎನ್‍ಇಕೆಆರ್‍ಟಿಸಿ ಹಾಗೂ ಎನ್‍ಡಬ್ಲೂಕೆಆರ್‍ಟಿಸಿ ಸೇರಿ ರಾಜ್ಯದಲ್ಲಿ 1.40 ಲಕ್ಷ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ. ಹೀಗಾಗಿ ಬಿಎಂಟಿಸಿ ಸೇರಿ ವಿವಿಧ ವಿಭಾಗಗಳ ಸಾರಿಗೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ, ಕೃಷಿ ಕಾಯ್ದೆಗಳ ವಿರುದ್ಧ ನಡೆದ ಕರ್ನಾಟಕ ಬಂದ್, ಭಾರತ್ ಬಂದ್ ಹಾಗೂ ಬಾರುಕೋಲು ಚಳವಳಿ ಸೇರಿ ಸಾಲು ಸಾಲು ಪ್ರತಿಭಟನೆಗಳಿಂದ ತತ್ತರಿಸಿರುವ ಬೆಂಗಳೂರು ನಗರದ ಜನತೆ ನಾಳೆಯೂ ಪರದಾಟ ನಡೆಸುವುದು ಪಕ್ಕಾ ಆಗಿದೆ. ಒಂದೇ ದಿನ ಸಾವಿರಾರು ನೌಕರರು ಪ್ರತಿಭಟನೆ ರಸ್ತೆಗೆ ಇಳಿಯುವುದರಿಂದ ನಾಳೆಯೂ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.
ನಾಳೆ ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧಧವರೆಗೆ ಸಾರಿಗೆ ನೌಕರರು ಕಾಲ್ನಡಿಗೆ ಜಾಥಾ ಹೊರಡಲಿದ್ದಾರೆ. ಸಾರಿಗೆ ನೌಕರರ ನಡಿಗೆ- ಸರ್ಕಾರಿ ನೌಕರರಾಗುವ ಕಡೆಗೆ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಲಿದ್ದಾರೆ. ಈ ಕಾಲ್ನಡಿಗೆ ಜಾಥಾದಲ್ಲಿ ಸಾರಿಗೆ ನೌಕರರು ತಮ್ಮ ಹೆಂಡತಿ ಮಕ್ಕಳೊಂದಿಗೆ ಭಾಗಿಯಾಗಲಿದ್ದಾರೆ. ಹೀಗಾಗಿ ಸಾರಿಗೆ ನೌಕರರ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಜತೆಗೆ ಈ ಜಾಥಾದಲ್ಲಿ ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಹ ಭಾಗಿಯಾಗಲಿದ್ದಾರೆ ಎಂದು ನೌಕರರ ಸಂಘ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








