ರಾಜಧಾನಿಯಲ್ಲಿ ಕೋವಿಡ್ ಬ್ಲಾಸ್ಟ್, ದೇಶದಲ್ಲಿ 2,64,202 ಕೇಸ್, ಶಿವಲಿಂಗ ಸ್ಪರ್ಷಿಸಿದ ಸೂರ್ಯ ರಶ್ಮಿ : TOP 10 News

1 min read

ರಾಜಧಾನಿಯಲ್ಲಿ ಕೋವಿಡ್ ಬ್ಲಾಸ್ಟ್, ದೇಶದಲ್ಲಿ 2,64,202 ಕೇಸ್, ಶಿವಲಿಂಗ ಸ್ಪರ್ಷಿಸಿದ ಸೂರ್ಯ ರಶ್ಮಿ : TOP 10 News

0.1 ರಾಜ್ಯದಲ್ಲಿ 28,723 ಕೇಸ್
ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಇಂದು 28,723 ಕೊರೊನಾ ಕೇಸ್ ಪತ್ತೆಯಾಗಿವೆ. ಇಂದು ಎಂಟು ಮಂದಿ ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ. 3,105 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸಕ್ರಿಯ ಕೇಸ್ ಗಳ ಸಂಖ್ಯೆ 1,41,337 ಕ್ಕೆ ಬಂದಿದೆ.

0.2 ರಾಜಧಾನಿಯಲ್ಲಿ ಕೋವಿಡ್ ಬ್ಲಾಸ್ಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 20,121 ಕೊರೊನಾ ಕೇಸ್ ಪತ್ತೆಯಾಗಿವೆ. ಇಂದು ನಗರದ ದಕ್ಷಿಣ ವಲಯದಲ್ಲಿ ಅತಿ ಕೇಸ್ ಗಳು ಪತ್ತೆಯಾಗಿವೆ. ಇಲ್ಲಿ 3,172 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಬೊಮ್ಮನಹಳ್ಳಿ ವಲಯದಲ್ಲಿ 2,232 , ದಾಸರಹಳ್ಳಿ 493, ಬೆಂಗಳೂರು ಪೂರ್ವ 3,126 , ಮಹದೇವಪುರ 2,343, ಆರ್ ಆರ್ನಗರ 1,528, ಪಶ್ಚಿಮ 2,454, ಯಲಹಂಕ 1,412, ಅನೇಕಲ್ 921, ಬೆಂಗಳೂರು ಹೊರವಲಯ 1,360 ಸೇರಿ ಒಟ್ಟು 20,121 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

0.3 ದೇಶದಲ್ಲಿ 2,64,202 ಕೇಸ್
ಭಾರತದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಹವಾ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,64,202 ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಅವಧಿಯಲ್ಲಿ ಕೊರೊನಾ ಸೋಂಕಿಗೆ 315 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಿನ್ನೆ ಒಂದು ದಿನದಲ್ಲಿ 1,09,345 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

0.4 ಶಿವಲಿಂಗ ಸ್ಪರ್ಷಿಸಿದ ಸೂರ್ಯ ರಶ್ಮಿ…
ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದ್ದು , ಆ ಕ್ಷಣ ಈ ವಿಸ್ಮಯ ಕಂಡು ಪುಳಕಿತರಾದ ಭಕ್ತಾಧಿಗಳು ಓಂ ನಮಃ ಶಿವಾಯ ಎಂದು ಹರನನ್ನ ಜಪಿಸಿದ್ದಾರೆ.. ಕಳೆದ ವರ್ಷ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ. ಮೋಡ ಅಡ್ಡ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಸೂರ್ಯರಶ್ಮಿ ಸ್ಪರ್ಶಿಸಿದ್ದು ಕಾಣಲಿಲ್ಲ.

0.5 ಬೂಸ್ಟರ್ ಡೋಸ್ ಪಡೆದ ರಾಜ್ಯಪಾಲರು
ಬೆಂಗಳೂರು: ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಬೂಸ್ಟರ್ ಡೋಸ್ ಪ್ರಾರಂಭಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯದ ರಾಜ್ಯಪಾಲರು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆದುಕೊಂಡರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡೋಸ್ ಪಡೆದುಕೊಂಡು ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಕೊರೊನಾ ಮಹಾಮಾರಿಯಿಂದ ಮುಕ್ತಿಯಾಗಲು ಲಸಿಕೆ ಅವಶ್ಯಕತೆ ಇದೆ. ಆದಕಾರಣ ರಾಜ್ಯದ ಜನ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

0.6 ಕೇಂದ್ರ ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್….
ಮೊದಲಾರ್ಧ ಅಧಿವೇಶನದ 1 ತಿಂಗಳ ವಿರಾಮದ ಬಳಿಕ ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಾಗುತ್ತಿದ್ದು, ಅಂದು ರಾಷ್ಟ್ರಪತಿಗಳು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್ -19 ಪ್ರಕರಣಗಳ ಹೆಚ್ಚಳದ ನಡುವೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಮತ್ತು ಅಧಿವೇಶನವು ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ಸೇರಿದಂತೆ ಐದು ರಾಜ್ಯಗಳ ಚುನಾವಣೆಗಳೊಂದಿಗೆ ಹೊಂದಿಕೆಯಾಗಲಿದೆ. ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಐದು ಸಂಸತ್ತಿನ ಅಧಿವೇಶನಗಳನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

0.7 ಸಮನ್ವಿ ರಸ್ತೆ ಅಪಘಾತದಲ್ಲಿ ಸಾವು
ಬೆಂಗಳೂರು : ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ತಾಯಿ-ಮಗಳು ಕೋಣನಕುಂಟೆಯ ವಾಜರಹಳ್ಳಿ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಸಮನ್ವಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಪ್ರಖ್ಯಾತಿ ಪಡೆದಿದ್ದರು. ಆ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟ ಸೃಜನ್ , ನಟಿ ತಾರಾ ಸೇರಿದಂತೆ ಹಲವರು ಸಮನ್ವಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

0.8 #METOO : ಅರ್ಜುನ್ ಸರ್ಜಾಗೆ ರಿಲೀಫ್..!
2018 ರಲ್ಲಿ ನಟಿ ಶ್ರುತಿ ಹರಿಹರನ್ ಜೆಂಟಲ್ ಮೆನ್ ಅರ್ಜುನ್ ಸರ್ಜಾ ವಿರುದ್ಧ #METOO ಆರೋಪ ಮಾಡಿ ಚಂದನವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ರು.. ಇದೇ ಮೀಟೂ ಪ್ರಕರಣದಲ್ಲಿ ಈಗ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್ ಸಿಕ್ಕಿದೆ.
ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿದೆ. ಅರ್ಜುನ್ ಸರ್ಜಾ ವಿರುದ್ಧ ಅಷ್ಟೆಲ್ಲಾ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಕೂಡ ಪೊಲೀಸರ ಬಿ ರಿಪೋರ್ಟ್ಗೆ ಆಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ಕೋರ್ಟ್ ಬಿ-ರಿಪೋರ್ಟ್ ಅಂಗೀಕರಿಸಿದೆ.

0. 9 ಇಂಗ್ಲೆಂಡ್ ಕಳಪೆ ಪ್ರದರ್ಶನಕ್ಕೆ IPL ಕಾರಣವಂತೆ….
ಇಂಗ್ಲೆಂಡ್ ಆಟಗಾರರು ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಲು ಐಪಿಎಲ್ ಕಾರಣವಾಗುತ್ತಿದೆಯಂತೆ. ಹೀಗಂತ ಟೀಮ್ ಇಂಡಿಯಾ ವಿರುದ್ಧ ತವರಿನಲ್ಲಿ ಇಂಗ್ಲೆಂಡ್ ಸರಣಿ ಸೋತ ಬಳಿಕ ಹಾಗೂ ಆಸ್ಟ್ರೇಲಿಯಾದಲ್ಲಿ ಹೀನಾಯವಾಗಿ ಆ್ಯಶಸ್ ಸರಣಿ ಕಳೆದುಕೊಂಡ ಮೇಲೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಅಂದುಕೊಂಡಿದೆ. ಹೀಗಾಗಿ ECB ಇದೀಗ ತನ್ನ ಆಟಗಾರರಿಗೆ ಲಗಾಮು ಹಾಕಲು ಸಿದ್ಧತೆ ನಡೆಸಿದೆ. IPL 2022 ರಲ್ಲಿ ಇಂಗ್ಲೆಂಡ್ ಆಟಗಾರರನ್ನು ನಿರ್ಬಂಧಿಸಲು ಯೋಚನೆ ಮಾಡುತ್ತಿದೆ.

10. ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಕೊರೊನಾ
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಕೊರೋನಾ ಕಾಣಿಸಿಕೊಂಡಿದೆ. 7 ಭಾರತೀಯ ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ತಿಳಿಸಿದೆ. ಎಲ್ಲಾ ಸೋಂಕಿತ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಸೊಂಕಿತರನ್ನು ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಠಾಕರ್, ತ್ರಿಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd