ಹುಬ್ಬಳ್ಳಿ ಗಲಭೆಯಲ್ಲಿ ಪರೋಕ್ಷವಾಗಿ ಭಾಗಿಯಾದವರೆಲ್ಲರಿಗೂ ಕಠಿಣ ಕ್ರಮ – DG IGP ಪ್ರವೀಣ್ ಸೂದ್
ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣದಲ್ಲಿ ಭಾಗಿಯಾದವರೆಲ್ಲರಿಗೂ ಕಠಿಣ ಶಿಕ್ಷೆ ನೀಡಲಾಗುವುದು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾದವರೆಲ್ಲರಿಗೂ ಕಠಿಣ ಶಿಕ್ಷೆ ನೀಡುತ್ತೇವೆ, ಪಿತೂರಿಯಲ್ಲಿ ಭಾಗಿಯಾದವರನ್ನು ಸಹ ಬಿಡುವುದಿಲ್ಲ ಎಂದು ರಾಜ್ಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಕೋರಮಂಗಲದ ಕೆಎಸ್ಆರ್ಪಿ ಮೂರನೇ ಬೆಟಾಲಿಯನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕವಾಯತು ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದವರನ್ನು ಬಂಧಿಸಿದ್ದೇವೆ. ಪರೋಕ್ಷವಾಗಿ ಭಾಗಿಯಾಗಿದ್ದವರನ್ನು ಬಂಧಿಸಲು ಸ್ವಲ್ಪ ಕಾಲ ಹಿಡಿಯುತ್ತದೆ. ಪರೋಕ್ಷವಾಗಿ ಕೈವಾಡ ಇರುವವರನ್ನು ಪತ್ತೆಹಚ್ಚುತ್ತೇವೆ ಎಂದು ತಿಳಿಸಿದರು.
ಇತ್ತೀಚೆಗೆ ಸಮಾಜದ ಮೇಲೆ ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮವನ್ನು ಬಹಳ ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಹಿಂದೂ-ಮುಸ್ಲಿಂರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೇಡದ ವಿಚಾರಗಳು ಗಮನ ಸೆಳೆಯುತ್ತಿವೆ. ಸಮಾಜದ ಶಾಂತಿ ಕೆಡಿಸುವವರು ಯಾರೇ ಆಗಿದ್ದರೂ, ಅವ್ರನ್ನ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು. ಸೋಷಿಯಲ್ ಮೀಡಿಯಾದಲ್ಲಿ ಇವರೇ ವ್ಯಕ್ತಿ ಎಂದು ಗುರುತು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಸೋಷಿಯಲ್ ಮೀಡಿಯಾ ಓಪನ್ ಫುಟ್ ಬಾಲ್ ಗ್ರೌಂಡ್ ತರ ಆಗಿದ್ದು ಯಾರು ಕೂಡ ಕಿಕ್ ಮಾಡಿ ಓಡಿಹೋಗಲು ಸಾಧ್ಯವಿದೆ ಎಂದು ವ್ಯಾಖ್ಯಾನಿಸಿದರು.