ಕೋವಿಡ್ ನಿಂದ ನೇರ ಸಂಕಷ್ಟಕ್ಕೊಳಗಾದ ಟ್ರಾವೆಲ್ಸ್ ಉದ್ಯಮಕ್ಕೆ ಸದ್ಯ ಉಳಿದಿರುವ ಏಕೈಕ ಭರವಸೆ ಸರ್ಕಾರ ಮಾತ್ರ:
ಮಾರಕ ಕೋವಿಡ್ ಸಂಕಷ್ಟದಿಂದಾಗಿ ಇಡೀ ಜಗತ್ತೇ ಮತ್ತೆ ಶೂನ್ಯಾವಸ್ಥೆಗೆ ಬಂದು ನಿಂತಿದೆ. ಈಗೀಗ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ತಮ್ಮ ಉದ್ದಿಮೆ ಮತ್ತು ವ್ಯವಹಾರವನ್ನು ಸುಧಾರಿಸಲು ಹೊಸ ಹೊಸ ಯೋಜನೆ, ಮಾರ್ಗಸೂಚಿ, ಸಹಾಯಧನ ಇತ್ಯಾಧಿ ಪ್ರೋತ್ಸಾಹಕ್ಕೆ ಮುಂದಾಗಿವೆ. ಆದರೆ ನಮ್ಮ ಭಾರತದಲ್ಲಿ ಕೇಂದ್ರದಲ್ಲಿರುವ ಮತ್ತು ರಾಜ್ಯಗಳ ಆಳುವ ಸರ್ಕಾರಗಳ ಕುಂಭಕರ್ಣ ನಿದ್ರೆ ಮಾತ್ರ ಇನ್ನೂ ಮುಗಿದಿಲ್ಲ. ತಂತ್ರಜ್ಞಾನ, ಆಟೋಮೊಬೈಲ್, ಉತ್ಪಾದನಾ ಕ್ಷೇತ್ರ, ಕೃಷಿ, ಸಾರಿಗೆ, ಪ್ರವಾಸೋದ್ಯಮ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಹಿಂದೆಂದೂ ಕಂಡು ಕೇಳದ ಹಿನ್ನೆಡೆ ಉಂಟಾಗಿದ್ದರೂ ಸರ್ಕಾರಗಳು ಮಾತ್ರ ದಿವ್ಯ ಮೌನವನ್ನು ಧಾರಣೆ ಮಾಡಿ ಕುಳಿತಿವೆ. ಅದರಲ್ಲೂ ಟ್ರಾನ್ಸ್ ಪೋರ್ಟ್ ಸೇವಾ ಕ್ಷೇತ್ರ ಅತ್ಯಂತ ಹೀನಾಯ ಹಂತ ತಲುಪಿದ್ದು, ಟ್ರಾವೆಲ್ಸ್ ನಡೆಸುವ ಬಹುತೇಕ ಮಾಲೀಕರ ಗೋಳು ಹೇಳತೀರದ್ದಾಗಿದೆ. ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿದ್ದ ಟ್ರಾವೆಲ್ಸ್ ಉದ್ಯಮ ಈಗ ಪೈಸೆ ಪೈಸೆಗೂ ಪರದಾಡುವ ಸ್ಥಿತಿ ತಲುಪಿದೆ.
ಸಿಲಿಕಾನ್ ಸಿಟಿ, ಐಟಿ ಕ್ಯಾಪಿಟಲ್ ಬೆಂಗಳೂರಿನ ಹತ್ತು ಹಲವು ಟ್ರಾವೆಲ್ಸ್ ಸಂಸ್ಥೆಗಳ ಮಾಲೀಕರು ಭವಿಷ್ಯದ ದಾರಿ ಕಾಣದೆ ಮುಂದೇನು ಎಂದು ಚಿಂತಿಸುತ್ತಾ ತಲೆಯ ಮೇಲೆ ಕೈ ಹೊತ್ತು ಕೂತಿದ್ದಾರೆ. ಐಟಿ ಸಂಸ್ಥೆಗಳ ಜೊತೆಗೆ ಕರಾರು ಮಾಡಿಕೊಂಡು ಹೊಸ ವಾಹನಗಳನ್ನು ಖರೀದಿಸಿ ಅಲ್ಲಿನ ಸೇವೆಗೆ ನಿಯುಕ್ತಿಗೊಳಿಸಲಾಗಿತ್ತು. ಕೋವಿಡ್ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ನಂತರದ ದಿನಗಳಲ್ಲಿ ರಾಜ್ಯದ ಎಲ್ಲಾ ಐಟಿ-ಬಿಟಿ ಸಂಸ್ಥೆಗಳೂ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಿದವು. ಐಟಿ ಟೆಕ್ಕಿಗಳ ಪಿಕ್ ಅಪ್ ಎಂಡ್ ಡ್ರಾಪ್ ಮೇಲೆ ಅವಲಂಭಿತವಾಗಿದ್ದ ಟ್ರಾವೆಲ್ಸ್ ಎಂಡ್ ಟ್ರಾನ್ಸ್ ಪೋರ್ಟ್ ಉದ್ಯಮಕ್ಕೆ ಬಿದ್ದ ಮೊದಲ ಹೊಡೆತವಿದು. 3 ತಿಂಗಳು ಎಲ್ಲಾ ಸರಿಯಾಗುತ್ತದೆ, ಮೊದಲಿನಂತೆಯೇ ವ್ಯವಹಾರ ಸುಧಾರಿಸುತ್ತದೆ ಎಂದುಕೊಂಡಿದ್ದ ಮಾಲೀಕರಿಗೆ ಆನಂತರ ಸರಣಿ ಸಂಕಷ್ಟಗಳು ಶುರುವಾದವು. ಬ್ಯಾಂಕಿನಲ್ಲಿ ವಾಹನಕ್ಕಾಗಿ ಪಡೆದ ಸಾಲಕ್ಕೆ ಮೋರ್ಟೋರಿಯಂ ಏನೋ ಸಿಕ್ಕಿತು. ಆದರೆ ಕೆಲಸವೇ ಇಲ್ಲದೇ ತಿಂಗಳ ಇಎಂಐ ಪಾವತಿಯಿಂದಷ್ಟೇ ಪರಿಹಾರ ಸಿಕ್ಕತೇ ವಿನಃ ಬ್ಯಾಂಕುಗಳ ಬಡ್ಡಿದರದಿಂದಲ್ಲ. ಕೇವಲ ಸರ್ಕಾರದ ಮೇಲೆ ಮಾತ್ರ ಭರವಸೆ ಇಟ್ಟುಕೊಳ್ಳಬೇಕಿದೆ ಟ್ರಾವಲ್ಸ್ ಉದ್ಯಮ.
ಇದೇ ವೇಳೆ ಐಟಿ ಸಂಸ್ಥೆಗಳು ಡಿಸೆಂಬರ್ ತನಕ ಅಂದರೆ ಈ ವರ್ಷ ಪೂರ್ತಿ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ಮುಂದುವರೆಸಿತು. ಈಗ ಐಟಿ ಸಂಸ್ಥೆಗಳಿಗೆ ಬಾಡಿಗೆ ತೆರಳುತ್ತಿದ್ದ ಟ್ರಾವೆಲ್ಸ್ ಸಂಸ್ಥೆಯ ವಾಹನಗಳು ನಿಂತಲ್ಲಿಯೇ ತುಕ್ಕು ಹಿಡಿಯುತ್ತಿವೆ. ಅತ್ತ ಬ್ಯಾಂಕಿನ ಮೋರ್ಟೋರಿಯಂ ಅವಧಿಯೂ ಮುಗಿದಿದ್ದು ಇಎಂಐ ಪಾವತಿಸಲು ಬ್ಯಾಂಕುಗಳಿಂದ ನಿತ್ಯ ಕರೆಗಳು ಬರುತ್ತಿವೆ. ತಿಂಗಳಿಗೆ 5 ಕೋಟಿ ವ್ಯವಹಾರ ನಡೆಸುತ್ತಿದ್ದ ಟ್ರಾವೆಲ್ಸ್ ಸಂಸ್ಥೆಗಳು 5 ಲಕ್ಷದ ವಹಿವಾಟು ನಡೆಸಲೂ ಪರದಾಡುತ್ತಿವೆ. ಕೆಲವು ಮಾಲೀಕರು ತಮ್ಮ ಸಂಸ್ಥೆಯ ಚಾಲಕರನ್ನು ಮನೆಗೆ ಕಳಿಸಿದ್ದರೇ, ಇನ್ನೂ ಕೆಲವು ಮಾಲೀಕರು ಸಾಲ ಸೋಲ ಮಾಡಿ ಸಂಸ್ಥೆಯನ್ನು ನಡೆಸಲು ಹೆಣಗಾಡುತ್ತಿದ್ದಾರೆ. ಹೊಸ ಸಾಲ ನೀಡಲು ಬ್ಯಾಂಕುಗಳೂ ಹಿಂದೇಟು ಹಾಕುತ್ತಿವೆ. ಇತ್ತ ಕರಾರಿನ ಪ್ರಕಾರ ಹಣ ಬಿಡುಗಡೆ ಮಾಡಲು ಐಟಿ ಸಂಸ್ಥೆಗಳು ಸಿದ್ಧವಿಲ್ಲ. ಹೀಗಾಗಿ ಟ್ರಾವೆಲ್ಸ್ ಮಾಲೀಕರು ಅತ್ತ ಬಾಣಲಿ ಇತ್ತ ಬೆಂಕಿ ಎನ್ನುವ ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಕೆಲಸಗಾರರಿಗೆ ಸಂಬಳವನ್ನೂ ಕೊಟ್ಟು, ವಾಹನಗಳ ನಿರ್ವಹಣೆ ನೋಡಿಕೊಂಡು, ಚಾಲಕರ ಸಂಕಷ್ಟವನ್ನೂ ಗಮನದಲ್ಲಿಟ್ಟುಕೊಂಡು ಉದ್ಯಮ ನಡೆಸುವುದು ಸದ್ಯಕ್ಕಂತೂ ಅಸಾಧ್ಯವಾಗಿ ತೋರುತ್ತಿದೆ.
ಚೇತರಿಕೆ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ ಟ್ರಾವೆಲ್ಸ್ ವಹಿವಾಟು:
ಸದ್ಯ ಮಾಲೀಕರಷ್ಟೇ ಸಂಕಷ್ಟ ಚಾಲಕರದ್ದೂ ಹೌದು. ಬೆಂಗಳೂರಿನ ಬಹುತೇಕ ಕ್ಷೇತ್ರಗಳ ಸಾರಿಗೆ ಸಂಚಾರಕ್ಕಾಗಿ ನಿಯೋಜನೆಗೊಂಡ ವಾಹನಗಳು ಚಾಲನೆ ನಿಲ್ಲಿಸಿ ತಿಂಗಳುಗಳೇ ಕಳೆದಿವೆ. ಬಹುತೇಕ ಸೇವಾ ವಲಯದ ಉದ್ಯಮಗಳು ತಮ್ಮ ಸಿಬ್ಬಂದಿಗಳಿಂದ ಮನೆಯಿಂದಲೇ ಕೆಲಸ ಮಾಡಿಸಿಕೊಳ್ಳುತ್ತಿದೆ. ಶಾಲೆ ಕಾಲೇಜುಗಳು ಬಂದ್ ಆಗಿವೆ. ಪ್ರವಾಸೋದ್ಯಮ ಚೇತರಿಸಿಕೊಳ್ಳಲಾರದಷ್ಟು ಹಿಂದೆ ಸರಿದಿದೆ. ತೀರ್ಥ ಕ್ಷೇತ್ರಗಳ ದೇಗುಲ ಮಠ ಮಾನ್ಯಗಳು ಅರ್ಧ ಬಾಗಿಲು ತೆಗೆದಿವೆ. ಹೀಗಾಗಿ ಈ ಎಲ್ಲ ಕಡೆ ಓಡಾಡುತ್ತಿದ್ದ ಟ್ರಾವೆಲ್ಸ್ ಉದ್ಯಮ ಪಾತಳಕ್ಕೆ ಕುಸಿದಿದೆ. ಮಾಲೀಕರಿಗೆ ವ್ಯವಹಾರ ವಹಿವಾಟುಗಳಿಲ್ಲ, ಚಾಲಕರಿಗೆ ಉದ್ಯೋಗವಿಲ್ಲ. ಸರಿಸುಮಾರು 14 ವರ್ಷಗಳಿಂದ ಟ್ರಾವೆಲ್ಸ್ ಉದ್ಯಮ ನಡೆಸುತ್ತಿರುವ ಶ್ರೀನಾಥ್ ತರಹದ ಉದ್ಯಮಿಗಳಿಗೇ ಈ ಪರಿ ಆರ್ಥಿಕ ಮುಗ್ಗಟ್ಟು ಎದುರಾದರೆ ಉಳಿದ ಸಣ್ಣ ಪುಟ್ಟ ಟ್ರಾವೆಲ್ಸ್ ಸಂಸ್ಥೆಗಳ ಗತಿಯೇನು ಎನ್ನುವುದು ಇಲ್ಲಿ ಉದ್ಭವಿಸುವ ಪ್ರಶ್ನೆ.
ಅಮೇರಿಕಾ, ಕೆನಡಾ, ಇಂಗ್ಲೆಂಡ್ ಮುಂತಾದ ಕಡೆ ಕ್ಷೀಣವಾಗಿರುವ ಉದ್ಯಮವನ್ನು ಮೇಲೆತ್ತಲು ಹತ್ತಾರು ಪ್ರೋತ್ಸಾಕರ ಯೋಜನೆಗಳನ್ನು ರೂಪಿಸಲಾಗುತ್ತದೆ. ಆದರೆ ಭಾರತದಲ್ಲಿ ಒಂದು ಉದ್ಯಮ ಕಣ್ಣುಮುಚ್ಚುತ್ತಿದ್ದರೂ ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತವೆ ಇಲ್ಲಿನ ಸರ್ಕಾರಗಳು. ಟ್ರಾವೆಲ್ಸ್ ಉದ್ಯಮದಿಂದಲೂ ದೇಶದ ಜಿಡಿಪಿಗೆ ಲಾಭವಾಗಿದೆ. ಟ್ರಾವೆಲ್ಸ್ ಮಾಲೀಕರು ಸಹ ಕ್ರಮವಾಗಿ ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿಸುತ್ತಲೇ ಬಂದಿದ್ದಾರೆ. 20 ಲಕ್ಷ ಕೋಟಿಯ ಆತ್ಮ ನಿರ್ಭರ್ ಭಾರತದ ಪ್ಯಾಕೇಜ್ ನಲ್ಲಿ, ಟ್ರಾವೆಲ್ಸ್ ನಂತಹ ಮಧ್ಯಮ ಮಟ್ಟದ, ನಿರಂತರ ನಡೆಯಬಹುದಾದ ಉದ್ಯಮಗಳ ಚೇತರಿಕೆ ನೀಡಬೇಕಿತ್ತು. ಆದರೆ ಕಾರ್ಪೋರೇಟ್ ವಲಯದ ಸಿರಿವಂತ ಕುಳಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ಸಣ್ಣ ಪುಟ್ಟ ಟ್ರಾವೆಲ್ಸ್ ನಂತ ಉದ್ಯಮಗಳು ಕಣ್ಣಿಗೆ ಬೀಳದಿರುವುದು ದುರಂತವೇ ಸರಿ.
ಸದ್ಯ ಕ್ಷೀಣವಾಗಿ ಕೊನೆಯ ಉಸಿರು ಎಳೆಯುತ್ತಿರುವ ಟ್ರಾವೆಲ್ಸ್ ಉದ್ಯಮವನ್ನು ಬದುಕಿಸಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಸರ್ಕಾರವೇ ಮುಂದೆ ನಿಂತು ಕರಾರಿನಂತೆ ಐಟಿ ಮಾಲಿಕರಿಂದ ಟ್ರಾವೆಲ್ಸ್ ಸಂಸ್ಥೆಗಳಿಗೆ ಬಾಡಿಗೆ ವಸೂಲಿ ಮಾಡಿಕೊಡಬೇಕಾಗಿದೆ. ಹೀಗಾದಲ್ಲಿ ಟ್ರಾವೆಲ್ಸ್ ಸಂಸ್ಥೆಗಳ ಕಿಂಚಿತ್ ಚೇತರಿಕೆ ಸಾಧ್ಯವಾಗುತ್ತದೆ. ಹೇಗಿದ್ದರೂ ಐಟಿ ಉದ್ಯಮ ನಿಂತಿಲ್ಲ ಅದರೆ ಮೇಲೆ ಅವಲಂಭಿತವಾದ ಟ್ರಾವೆಲ್ಸ್ ಏಕೆ ತೊಂದರೆ ಅನುಭವಿಸಬೇಕು ಎನ್ನುವುದು ಟ್ರಾವೆಲ್ಸ್ ಮಾಲೀಕರ ವಾದ. ಇನ್ನು ಬ್ಯಾಂಕುಗಳ ಮೋರ್ಟೋರಿಯಂ ಅವಧಿ ವಿಸ್ತರಣೆಯಾಗಬೇಕು ಹಾಗೂ ಈಗ ವಿಧಿಸುತ್ತಿರುವ ತಲೆ ತಿರುಗಿಸುವ ಬಡ್ಡಿ ಧರವನ್ನು ಕಡಿತಗೊಳಿಸಬೇಕು. ಜೊತೆಗೆ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಕ್ರಮಗಳನ್ನು ರೂಪಿಸಬೇಕು. ಧಾರ್ಮಿಕ ಪ್ರವಾಸೋದ್ಯಮ ಹಾಗೂ ತೀರ್ಥ ಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬೇಕು. ಹೀಗಾದಲ್ಲಿ ಮಾತ್ರ ಟ್ರಾವೆಲ್ಸ್ ಉದ್ಯಮ ಮತ್ತೆ ಕ್ರಮೇಣ ಎದ್ದು ನಿಲ್ಲುವ ಪ್ರಯತ್ನ ಮಾಡಲಿದೆ ಎನ್ನುವುದು ಟ್ರಾವೆಲ್ಸ್ ಸಂಸ್ಥೆಯ ಮಾಲೀಕರ ಅಭಿಪ್ರಾಯ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಲಿ ಎನ್ನುವುದು ನಮ್ಮ ಸದಾಶಯವೂ ಹೌದು.
-ವಿಶ್ವಾಸ್ ಭಾರದ್ವಾಜ್, (ವಿಭಾ)