ಸಿಪಿಎಲ್ 2020- ಗೆಲುವಿನ ಅಭಿಯಾನದಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್
2020ರ ಕೆರೆಬಿಯನ್ ಲೀಗ್ ಟೂರ್ನಿಯಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಗೆಲುವಿನ ಓಟದಲ್ಲಿ ಮುಂದುವರಿಯುತ್ತಿದೆ. ಟೂರ್ನಿಯ 13ನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿರುವ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಒಟ್ಟು ಎಂಟು ಅಂಕಗಳನ್ನು ಪಡೆದುಕೊಂಡಿದೆ.
ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಆರು ವಿಕೆಟ್ ಗಳಿಂದ ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ಮಣಿಸಿತು. ಡ್ವಾನ್ ಬ್ರೇವೋ ಅವರು ಈ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಡ್ವಾನ್ ಬ್ರೇವೋ ಅವರು 500 ವಿಕೆಟ್ ಪಡೆದಿದ್ದಾರೆ. ಹಾಗೇ ಡ್ವಾನ್ ಬ್ರೇವೋ ಮತ್ತು ಡರೇನ್ ಬ್ರೇವೋ ಅವರು ಈ ಪಂದ್ಯದ ಗೆಲುವಿನ ರೂವಾರಿಗಳಾಗಿದ್ದಾರೆ.
ಟಾಸ್ ಗೆದ್ದ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತಗೊಂಡಿತ್ತು. ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನು 17.1 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು. ಹೀಗಾಗಿ ಸೇಂಟ್ ಲೂಸಿಯಾ ಝೌಕ್ಸ್ ತಂಡ 6 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತ್ತು. ಸೇಂಟ್ ಲೂಸಿಯಾ ತಂಡದ ಪರ ಮಹಮ್ಮದ್ ನಬೀ ಅಜೇಯ 30 ರನ್ ಮತ್ತು ನಜಿಬುಲ್ಲಾಹ್ ಝಾದ್ರನ್ 21 ರನ್ ಗಳಿಸಿ ಗಮನ ಸೆಳೆದ್ರು. ಡ್ವಾನ್ ಬ್ರೇವೋ ಅವರು ಎರಡು ವಿಕೆಟ್ ಕಬಳಿಸಿದ್ರು.
ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದ್ದ ಕಾರಣ ಟ್ರಿಂಬಾಗೋ ನೈಟ್ ರೈಡರ್ಸ್ ತಂಡಕ್ಕೆ 9 ಓವರ್ ಗಳಲ್ಲಿ 72 ರನ್ ಗಳ ಸವಾಲನ್ನು ಒಡ್ಡಲಾಗಿತ್ತು. ಆರಂಭದಲ್ಲೇ ಟಿಕೆಆರ್ ತಂಡ ಆಘಾತ ಅನುಭವಿಸಿದ್ರೂ ಕಾರ್ಲಿನ್ ಮುನ್ರೋ 17 ರನ್, ಡರೇನ್ ಬ್ರೇವೋ ಅಜೇಯ 23 ರನ್ ಹಾಗೂ ಸೆಲ್ಫರ್ಟ್ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಐತಿಹಾಸಿಕ ಸಾಧನೆ ಮಾಡಿದ್ದ ಡ್ವಾನ್ ಬ್ರೇವೋ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.