ಲಾಕ್ ಡೌನ್ 2.0 ಮೇ 3 ರಂದು ಮುಕ್ತಾಯಗೊಳ್ಳಲಿದ್ದು, ದೇಶದಲ್ಲಿ ದೀರ್ಘಕಾಲದವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದರೆ ದೇಶದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಕೋವಿಡ್ 19 ವೈರಸ್ ಸಾಂಕ್ರಾಮಿಕಕ್ಕಿಂತಲೂ ಹೆಚ್ಚಾಗಿರುತ್ತದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಸ್ಥಿತಿಯಲ್ಲೇ ಬಹಳ ದಿನ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಸತ್ಯ. ದೇಶದಲ್ಲಿ ಒಟ್ಟಾರೆ ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ, ಸಾವಿನ ಪ್ರಮಾಣ ಶೇ. 0.25-0.5ನಷ್ಟಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಈ ಪ್ರಮಾಣ ಬಹಳ ಕಡಿಮೆ. ದೇಶದಲ್ಲಿ ಪ್ರತಿವರ್ಷ 90 ಲಕ್ಷ (9 ಮಿಲಿಯನ್) ಮಂದಿ ಬೇರೆ, ಬೇರೆ ಕಾರಣಗಳಿಂದಾಗಿ ಸಾವನ್ನಪ್ಪುತ್ತಾರೆ. ಈ ಪೈಕಿ ಕಾಲು ಭಾಗದಷ್ಟು ಮಂದಿ ಮಾಲಿನ್ಯದ ಕಾರಣದಿಂದಾಗಿ ಸಾವಿಗೆ ಶರಣಾಗುತ್ತಾರೆ. ಏಕೆಂದರೆ, ಭಾರತ, ವಿಶ್ವದ ಅತಿ ಮಾಲಿನ್ಯ ದೇಶಗಳಲ್ಲಿ ಒಂದು ಎಂದು ಹೇಳಿದರು.
2 ತಿಂಗಳ ಅವಧಿಯಲ್ಲಿ ಕೋವಿಡ್ 19 ವೈರಸ್ ಗೆ 1 ಸಾವಿರ ಮಂದಿ ಬಲಿಯಾಗಿದ್ದಾರೆ. ಪ್ರತಿವರ್ಷ ನೈಸರ್ಗಿಕವಾಗಿ ಸಾಯುವ 90 ಲಕ್ಷ ಮಂದಿಗೆ ಹೋಲಿಸಿದರೆ ಈ ಸಂಖ್ಯೆ ನಗಣ್ಯ. ಹಾಗಾಗಿ, ಭಾರತ ಕೋವಿಡ್ 19 ವೈರಸ್ ಅನ್ನು ಹೊಸ ಸಾಮಾನ್ಯ ಸಂಕಷ್ಟ ಎಂದು ಪರಿಗಣಿಸಿ, ದುರ್ಬಲರನ್ನು ರಕ್ಷಿಸಿ, ದೈಹಿಕವಾಗಿ ಸಮರ್ಥರಾಗಿರುವವರಿಗೆ ಕೆಲಸಕ್ಕೆ ಮರಳಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.