ಇನ್ಮುಂದೆ ನಮಗೂ ವಿಶ್ವ ಆರೋಗ್ಯ ಸಂಸ್ಥೆಗೂ ಸಂಬಂಧವಿಲ್ಲ : ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ : ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಕಿಡಿಕಾರುತ್ತಲೇ ಇದ್ದ ಅಮೆರಿಕಾ ಇಂದು ಅದರ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದು, ಇನ್ಮುಂದೆ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ವೈಟ್ ಹೌಸಿನ ರೋಸ್ ಗಾರ್ಡ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ವಿಶ್ವಸಂಸ್ಥೆಗೆ ಅಮೆರಿಕಾ 3,400 ಕೋಟಿಯಷ್ಟು ಹಣವನ್ನು ನೀಡುತ್ತದೆ. ಆದರೆ ಚೀನಾ ಬರೀ ಮೂನ್ನೂರು ಕೋಟಿ ನೀಡುತ್ತದೆ. ಆದಾಗ್ಯು ಚೀನಾದ ಕಂಟ್ರೋಲ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೆಲಸ ಮಾಡುತ್ತಿದೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಸ್ ನಿಯಂತ್ರಣದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಅಲ್ಲದೇ ಇದೇ ಕಾರಣಕ್ಕೆ ಡಬ್ಲ್ಯುಹೆಚ್ ಒ ಜೊತೆಗಿನ ನಮ್ಮ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳುತ್ತೇವೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಇಷ್ಟೇ ಅಲ್ಲದೆ ಚೀನಾದ ಅಮೆರಿಕಾ ವಿವಿಗಳಿಗೆ ಚೀನೀ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರುವುದನ್ನ ಸಮರ್ಥಿಸಿಕೊಂಡ ಟ್ರಂಪ್, ಹಾಂಗ್ ಕಾಂಗ್ ಇಡೀ ಜಗತ್ತಿಗೆ ಕೊರೊನಾವನ್ನು ಹರಡಿದೆ. ಇದರಿಂದ ಅಮೇರಿಕಾದ ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚೀನಾದೊಂದಿಗೆ ಯಾವುದೇ ವ್ಯವಹಾರ ಇಟ್ಟುಕೊಳ್ಳದಂತೆ ತಮ್ಮ ಸರ್ಕಾರಕ್ಕೆ ಸೂಚಿಸಲಾಗಿದೆ. ಚೀನಾದಿಂದ ಬರುವ ವಿದ್ಯಾರ್ಥಿಗಳಿಗೂ ನಿಷೇಧ ಹೇರುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದಿದ್ದಾರೆ.
ಇನ್ನು 10 ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಸಂಪೂರ್ಣವಾಗಿ ಚೀನಾ ಹಿಡಿತದಲ್ಲಿದೆ ಎಂದು ಟ್ರಂಪ್ ಆರೋಪಿಸಿದ್ದರು. ಅಲ್ಲದೆ ಇನ್ನೂ 30 ದಿನಗಳೊಳಗೆ ತನ್ನ ನಡತೆಯಲ್ಲಿ ಬದಲಾವಣೆ ಕಾಣಿಸದಿದ್ದರೆ ಆರ್ಥಿಕ ನೆರವನ್ನು ಶಾಶ್ವತವಾಗಿ ಕಡಿತಗೊಳಿಸುವುದಾಗಿ ಟ್ರಂಪ್ ಹೇಳಿದ್ದರು.








