ವಾಷಿಂಗ್ಟನ್, ಜೂನ್ 4: ಅಮೆರಿಕ ಸರ್ಕಾರ ಚೀನಾದ ವಿಮಾನಗಳಿಗೆ ದೇಶದೊಳಗೆ ಪ್ರವೇಶ ನಿರಾಕರಿಸಲು ಚಿಂತನೆ ನಡೆಸುತ್ತಿದೆ. ಜೂನ್ ತಿಂಗಳ ಮಧ್ಯ ಭಾಗದಿಂದಲೇ ಈ ನಿಯಮ ಜಾರಿಗೊಳಿಸಿ ಚೀನಾವನ್ನು ಒತ್ತಡಕ್ಕೆ ಸಿಲುಕಿಸಿ ಕಟ್ಟಿ ಹಾಕಲು ಅಮೆರಿಕ ಸರ್ಕಾರ ಯೋಜನೆ ಮಾಡಿಕೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜೂನ್ 16ನೇ ದಿನಾಂಕದಿಂದ ಚೀನಾದ ವಿಮಾನಗಳಿಗೆ ನಿರ್ಬಂಧ ಹೇರಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ತಿಳಿಸಿದೆ.
ಕೊರೋನಾ ಸೋಂಕಿನ ಕಾರಣದಿಂದ ಉಂಟಾದ ಚೀನಾ ಅಮೆರಿಕ ಮನಸ್ತಾಪ ಮತ್ತಷ್ಟು ಹಳಸಿದ್ದು, ಎರಡೂ ದೇಶಗಳ ಮಧ್ಯೆ ಉಂಟಾದ ಬಿರುಕು ದಿನ ಕಳೆದಂತೆ ಮತ್ತಷ್ಟು ವಿಸ್ತರಿಸುತ್ತಾ ಸಾಗಿದೆ. ಇತ್ತೀಚೆಗೆ ಅಮೆರಿಕ ಅಂತರರಾಷ್ಟ್ರೀಯ ವಿಮಾನ ಯಾನ ಒಪ್ಪಂದಕ್ಕೆ ಚೀನಾ ಬದ್ಧವಾಗಿಲ್ಲ ಎಂದು ಆರೋಪಿಸಿದ್ದು, ಇದು ಚೀನಾ ವಿಮಾನಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯನ್ನು ಪುಷ್ಟಿಕರಿಸಿದೆ.
ಅಮೆರಿಕ ಚೀನಾದ ಏರ್ಲೈನ್ಸ್, ಏರ್ ಚೀನಾ, ಚೀನಾ ಈಸ್ಟರ್ನ್ ಏರ್ ಲೈನ್ಸ್ ಕಾರ್ಪೊರೇಷನ್, ಚೀನಾ ಸದರ್ನ್ ಏರ್ ಲೈನ್ಸ್ ಮತ್ತು ಹೈನನ್ ಏರ್ ಲೈನ್ಸ್ ಹೋಲ್ಡಿಂಗ್ ಕೋ ಇವುಗಳ ಪ್ರವೇಶಕ್ಕೆ ನಿರ್ಬಂಧ ಹೇರಬಹುದು ಎಂದು ಹೇಳಲಾಗಿದೆ.
ಆದರೆ ಶ್ವೇತ ಭವನ ಮತ್ತು ಸಾರಿಗೆ ಇಲಾಖೆಯು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಅಮೆರಿಕದ ರಾಯಭಾರಿ ಕೂಡ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಟ್ರಂಪ್ ಸರ್ಕಾರವು ಚೀನಾದ ಖಾಸಗಿ ಪ್ರಯಾಣಿಕರ ವಿಮಾನಗಳ ಮೇಲೂ ನಿರ್ಬಂಧ ಹೇರಲಿದೆ ಎಂದು ಹೇಳಲಾಗಿದೆ.