ಹೊಸದಿಲ್ಲಿ, ಜೂನ್ 3 : ಚೀನಾ ಗಡಿಯಲ್ಲಿ ಭಾರತದ ಜೊತೆ ಯುದ್ಧಕ್ಕೆ ತಯಾರಾಗಿ ನಿಂತಿದ್ದರೆ, ಇತ್ತ ಅಮೆರಿಕ ಚೀನಾವನ್ನು ಒಬ್ಬಂಟಿಯಾಗಿಸಲು ಯೋಜನೆ ತಯಾರಿಸುತ್ತಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜಿ7 ಶೃಂಗಸಭೆ ತಡವಾಗುತ್ತಿದ್ದು, ಚೀನಾವನ್ನು ಎದುರು ಹಾಕಲು ಬಯಸದ ಸದಸ್ಯ ರಾಷ್ಟ್ರಗಳು ಅಮೆರಿಕದ ಯೋಜನೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ.
ಆದರೆ ಅದ್ಯಾವುದನ್ನೂ ಕ್ಯಾರೆ ಮಾಡದ ಅಮೆರಿಕ ಅಧ್ಯಕ್ಷ ಮಾತ್ರ ಜಿ7 ಶೃಂಗಸಭೆಯಲ್ಲಿ ಚೀನಾವನ್ನು ದೂರ ಇಟ್ಟು, ರಷ್ಯಾ, ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳನ್ನು ಸೇರಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. ಈ ಮೂಲಕ ಚೀನಾವನ್ನು ಏಕಾಂಗಿ ಮಾಡುವುದು ಟ್ರಂಪ್ ರ ಆಲೋಚನೆ. ಈ ಬಗ್ಗೆ ಈಗಾಗಲೇ ಅಮೆರಿಕ ಅಧ್ಯಕ್ಷ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ರಿಗೂ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಪುಟಿನ್ ಈ ಬಗ್ಗೆ ತಕ್ಷಣಕ್ಕೆ ಏನೂ ಪ್ರತಿಕ್ರಿಯೆ ನೀಡಿಲ್ಲ. ಹಾಗೊಂದು ವೇಳೆ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತ ಹಾಗೂ ರಷ್ಯಾ ಒಪ್ಪಿದರೆ ಚೀನಾ ಜಾಗತಿಕವಾಗಿ ಏಕಾಂಗಿಯಾಗುವುದರಲ್ಲಿ ಅನುಮಾನ ಇಲ್ಲ.








