ಹುಬ್ಬಳ್ಳಿ: ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿರುವ ಪಂಚಮಸಾಲಿ ಮಠಕ್ಕೆ ನಾಲ್ಕು ದಿನಗಳಿಂದ ಬೀಗ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಮಠದಿಂದ ಬಸವ ಜಯಮೃತ್ಯುಂಜಯ ಶ್ರೀಗಳನ್ನು ಹೊರಹಾಕುವ ಕುರಿತು ಟ್ರಸ್ಟ್ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಮಠದಲ್ಲಿ ಪರ್ಯಾಯ ವ್ಯವಸ್ಥೆಗೆ ಚಿಂತನೆ
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಶಪ್ಪನವರ್, ಮಠದಿಂದ ಜಯಮೃತ್ಯುಂಜಯ ಶ್ರೀಗಳನ್ನು ಹೊರಹಾಕಿ, ಕೂಡಲಸಂಗಮಪೀಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಟ್ರಸ್ಟ್ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಗಂಭೀರ ಆರೋಪಗಳು:
“ಸ್ವಾಮೀಜಿ ಒಂದು ಪಕ್ಷದ ಬ್ಯಾನರ್ ಅಡಿಯಲ್ಲಿ ಹೋಗಿ ಕೋರುತ್ತಿದ್ದಾರೆ. ಓರ್ವ ವ್ಯಕ್ತಿಯ ಪರವಾಗಿ ಮಾತ್ರ ಮಾತನಾಡುತ್ತಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಅವರ ನಡವಳಿಕೆ ಬದಲಾವಣೆ ಆಗಿದ್ದು ಸತ್ಯ. ನಮ್ಮ ಸಮಾಜದವರ ಮೇಲೆ ಅನೇಕ ಕಡೆ ದೌರ್ಜನ್ಯ ನಡೆದಿದೆ, ಆದರೆ ಅಲ್ಲಿ ಹೋಗಿ ಸ್ವಾಮೀಜಿ ಯಾರಿಗೂ ಸ್ವಾಗತ ಹೇಳಿಲ್ಲ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರಚಾರ ಪ್ರಿಯರಾಗಿದ್ದಾರೆ. ಪ್ರತಿದಿನ ಬೆಳಗ್ಗೆ ಎದ್ದರೆ ಬರುತ್ತಾರೆ” ಎಂದು ಅವರು ಆರೋಪಿಸಿದರು.
ಮಠದ ಮಾಲೀಕತ್ವ ಟ್ರಸ್ಟ್‌ನದ್ದು: ಕಾಶಪ್ಪನವರ್
ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಈ ಪರ್ಯಾಯ ವ್ಯವಸ್ಥೆಯಲ್ಲಿ ಹೊಸ ಗುರುಗಳನ್ನು ನೇಮಕ ಮಾಡುವುದು ಖಚಿತ ಎಂದು ಕಾಶಪ್ಪನವರ್ ಸ್ಪಷ್ಟಪಡಿಸಿದರು. “ಮಠಕ್ಕೆ ಮಾಲೀಕರು ಸ್ವಾಮೀಜಿ ಅಲ್ಲ, ನಮ್ಮ ಟ್ರಸ್ಟ್. ಮಠವನ್ನು ನೋಡಿಕೊಳ್ಳುವಂತೆ ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಿದ್ದೆವು. ಮಠ ನೀಡಿದ್ದು ಧರ್ಮ ಪ್ರಚಾರ ಮತ್ತು ಸಂಘಟನೆಗೆ ಮಾತ್ರ. ಅದು ಬಿಟ್ಟು ಮನೆ ಅಂತ ಮಾಡಿಕೊಂಡು ಓಡಾಡುವುದು ಸರಿಯಲ್ಲ” ಎಂದು ಅವರು ಹೇಳಿದರು. ಸ್ವಾಮೀಜಿ ಬೆಳಗಾವಿ ಮತ್ತು ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆ ಮಾಡಿದ್ದಾರೆ. ಸ್ವತಃ ಸ್ವಾಮೀಜಿ ಮಲಪ್ರಭಾ ನದಿಯ ಮೇಲೆ ಮಠ ಕಟ್ಟುವುದಾಗಿ ಹೇಳಿದ್ದಾರೆ. ಕೆಲ ಅಗ್ರಗಣ್ಯ ನಾಯಕರು ಕೂಡ ಹೇಳಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯಾನಂದ ಕಾಶಪ್ಪನವರ್ ಹರಿಹಾಯ್ದರು
ಮಠಕ್ಕೆ ಬೀಗ ಹಾಕಲು ಕಾರಣ: ನೀಲಕಂಠ ಅಸೂಟಿ
ಇದೇ ವೇಳೆ, ಪಂಚಮಸಾಲಿ ಪೀಠದ ಸ್ವಾಮೀಜಿ ಮತ್ತು ಟ್ರಸ್ಟ್ ನಡುವಿನ ಗುದ್ದಾಟದ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಪಂಚಮಸಾಲಿ ಮುಖಂಡ ನೀಲಕಂಠ ಅಸೂಟಿ, “ಬಸವ ಜಯಮೃತ್ಯುಂಜಯ ಸ್ವಾಮೀಜಿ ಪೀಠದಲ್ಲಿ ಇರುತ್ತಿರಲಿಲ್ಲ. ಎರಡು ವರ್ಷದಿಂದ ಕೂಡಲಸಂಗಮ ಮಠಕ್ಕೆ ಸ್ವಾಮೀಜಿ ಬಂದೇ ಇಲ್ಲ. ಮಠಕ್ಕೆ ಬಂದು ವಾಸ್ತವ್ಯ ಮಾಡಿ ಅಂತ ಅನೇಕ ಬಾರಿ ನಾವು ಹೇಳಿದ್ದೆವು. ಯಾರು ಇಲ್ಲದಿದ್ದಾಗ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತಿದ್ದವು. ಹೀಗಾಗಿ ಪೀಠಕ್ಕೆ ಬೀಗ ಹಾಕಲು ಟ್ರಸ್ಟ್ ನಿರ್ಧಾರ ಕೈಗೊಂಡಿತ್ತು” ಎಂದು ಸ್ಪಷ್ಟಪಡಿಸಿದರು.
ಅವರು ಮುಂದುವರಿಸಿ, “ಆದರೆ ಏಕಾಏಕಿ ಹೋಗಿ ಪೀಠದ ಬಾಗಿಲು ಮುರಿದಿದ್ದಾರೆ. ನಿತ್ಯ ಅಲ್ಲಿ ಇದ್ದಿದ್ದರೆ ಮಠಕ್ಕೆ ಬೀಗ ಹಾಕುವ ಪ್ರಶ್ನೆಯೇ ಇರುತ್ತಿರಲಿಲ್ಲ. ಸ್ವಾಮೀಜಿ ಮಾಡಬಾರದ ಕೆಲಸ ಮಾಡಬಾರದು ಅಂತ ಹೇಳಿದ್ದೆವು. 2019ರಲ್ಲಿ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ನೋಟಿಸ್ ನೀಡಿದ್ದೆವು. ಸರಿಪಡಿಸಿಕೊಂಡು ಹೋಗುತ್ತೇನೆ ಅಂತ ಸ್ವಾಮೀಜಿ ಕೂಡ ಪತ್ರ ಬರೆದಿದ್ದರು. ಆದರೂ ಜಯಮೃತ್ಯುಂಜಯ ಶ್ರೀಗಳು ವರ್ತನೆ ಸರಿ ಮಾಡಿಕೊಂಡಿಲ್ಲ” ಎಂದು ನೀಲಕಂಠ ಅಸೂಟಿ ಅವರು ಜಯಮೃತ್ಯುಂಜಯ ಶ್ರೀಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.








