ಹೈದರಾಬಾದ್, ಜೂನ್ 4: ಭಾರತದ ಅತಿ ಶ್ರೀಮಂತ ದೇವಸ್ಥಾನ ಎಂದು ಪರಿಗಣಿಸಲ್ಪಟ್ಟಿರುವ ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ನಲ್ಲಿ ಕೆಲವೇ ದಿನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಮಂಡಳಿ ತಿಳಿಸಿದೆ. ಈ ಮೊದಲು ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದ್ದು, ತಿರುಪತಿ ದೇವಸ್ಥಾನಕ್ಕೆ ಸೇರಿದ ಸ್ಥಿರಾಸ್ತಿಗಳ ಮಾರಾಟ ಮಾಡಲು ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಮಂಡಳಿ ನಿರ್ಧರಿಸಿರುವುದಾಗಿ ಪ್ರಕಟಿಸಿದಾಗ ತೀವ್ರ ವಿವಾದ ಮತ್ತು ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ)
ಮಂಡಳಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ತಿರುಪತಿ ದೇವಸ್ಥಾನದ ವತಿಯಿಂದ ಹೊರಬರುವ ತಿಂಗಳ ಮ್ಯಾಗಜಿನ್ ನಲ್ಲಿ ಪ್ರಕಟವಾಗಿರುವ 9 ವರ್ಷದ ಬಾಲಕನೊಬ್ಬ ಬರೆದ ರಾಮಾಯಣ ಈ ವಿವಾದದ ಕೇಂದ್ರ ಬಿಂದು.
9 ವರ್ಷದ ಪುನೀತ್ ಎಂಬಾತ ಬರೆದ ರಾಮಾಯಣದಲ್ಲಿ ಸೀತಾ ಮಾತೆಗೆ ಒಬ್ಬನೇ ಮಗ. ಆತನೇ ಲವ. ಕುಶ ಎಂಬಾತ ಸೀತೆಯ ಮಗನಲ್ಲ. ಕುಶ ಎನ್ನುವುದು ದರ್ಬೆಯಿಂದ ಮಾಡಿದ ಒಂದು ಆಟಿಕೆ.
ಇದೀಗ ಅಂಧ್ರ ಪ್ರದೇಶದಲ್ಲಿ ಭಾರೀ ವಿವಾದದ ಅಲೆಯನ್ನೇ ಎಬ್ಬಿಸಿದ್ದು ಆಂಧ್ರದ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಹಲವಾರು ಬಗೆಯ ರಾಮಾಯಣಗಳಿದ್ದರೂ, ವಾಲ್ಮೀಕಿ ಬರೆದ ರಾಮಾಯಣ ಎಲ್ಲದಕ್ಕೂ ಮೂಲ ಎಂದು ಪರಿಗಣಿಸಲಾಗಿದೆ. ಕೆಲವರು ಅವರ ಕಲ್ಪನೆಯ ರಾಮಾಯಣವನ್ನು ಅವರಿಗೆ ತೋಚಿದಂತೆ ಪ್ರಕಟಿಸಿದ್ದರೂ, ಯಾವ ರಾಮಾಯಣದಲ್ಲೂ ಸೀತೆಯ ಮಕ್ಕಳಾದ ಲವ ಕುಶರ ಬಗ್ಗೆ ಆಕ್ಷೇಪಾರ್ಹ ಲೇಖನಗಳಿಲ್ಲ. ಹೀಗಿರುವಾಗ ಯಾವುದೇ ಆಧಾರಗಳಿಲ್ಲದೇ ಒಬ್ಬ 9 ವರ್ಷದ ಸಣ್ಣ ಬಾಲಕ ಬರೆದ ರಾಮಾಯಣವನ್ನು ಟಿಟಿಡಿ ಹೇಗೆ ಮ್ಯಾಗಜೀನ್ ನಲ್ಲಿ ಪ್ರಕಟಿಸಿದೆ ಎಂದು ಬಿಜೆಪಿ ನಾಯಕರು ಆಕ್ರೋಶಭರಿತರಾಗಿದ್ದಾರೆ. ರಾಮಾಯಣದ ಕಥೆಯನ್ನು ತಿರುಚುವ ಮೂಲಕ ಟಿಟಿಡಿ ಮಂಡಳಿ ಹಿಂದೂ ಧರ್ಮದ ಜನರ ಭಾವನೆಯನ್ನು ಘಾಸಿಗೊಳಿಸಿದ್ದಾರೆ. ಇದಕ್ಕೆ ಕಾರಣಿಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಂಧ್ರದ ಬಿಜೆಪಿ ವಕ್ತಾರ ಬುದ್ಧ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಟಿಟಿಡಿ ಮ್ಯಾಗಜಿನ್ ನಲ್ಲಿ ಮಾಹಿತಿಯನ್ನು ಗಮನಿಸದೇ ಪ್ರಕಟಿಸಿರುವ ಸಂಪಾದಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ನೋವಾಗಿದ್ದರೆ, ನಾನು ಅವರ ಕ್ಷಮೆ ಕೋರುತ್ತೇನೆ ಎಂದು ಟಿಟಿಡಿ ಚೇರ್ಮನ್ ವೈ.ವಿ. ಸುಬ್ಬಾ ರೆಡ್ಡಿ ಹೇಳಿದ್ದಾರೆ.








