Chikkaballapur: ಕೊಳವೆಬಾವಿ ಯೋಜನೆ ವಿಳಂಬ| ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ ಶಿಸ್ತುಕ್ರಮದ ಎಚ್ಚರಿಕೆ : ಸಚಿವ ಸುಧಾಕರ್
1 min read
ಕೊಳವೆಬಾವಿ ಯೋಜನೆ ವಿಳಂಬ| ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ ಶಿಸ್ತುಕ್ರಮದ ಎಚ್ಚರಿಕೆ : ಸಚಿವ ಸುಧಾಕರ್
ಚಿಕ್ಕಬಳ್ಳಾಪುರ: ನಾನಾ ಅಭಿವೃದ್ಧಿ ನಿಗಮಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಕೊಳವೆಬಾವಿಗಳನ್ನು ಕೊರೆಸುವುದರಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಜಿಲ್ಲಾ ಮಟ್ಟದಲ್ಲೇ ಟೆಂಡರ್ ಪ್ರಕ್ರಿಯೆಗೆ ಸರಕಾರದ ಹಂತದಲ್ಲಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ನಿಗಮಗಳ ಅಡಿಯಲ್ಲಿ ಕೊಳವೆಬಾವಿ ಕೊರೆಸಿದ್ದರೂ ಮೋಟರ್ ನೀಡಿ ವಿದ್ಯುತ್ ಸಂಪರ್ಕ ನೀಡದ ಕಾರಣಕ್ಕೆ ಕೂಡ ವಿಳಂಬ ಆಗುತ್ತಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ನೀಡಿರುವ ಗುರಿಯನ್ನು ಈಗಲೂ ಪೂರ್ಣಗೊಳಿಸಿಲ್ಲ. ರಾಜ್ಯ ಮಟ್ಟದ ಬದಲು ಜಿಲ್ಲಾ ಮಟ್ಟದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸುವುದು ಸೂಕ್ತ. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೊಳವೆಬಾವಿ ಕೊರೆಸಿದ್ದರೂ ಮೋಟರ್ ನೀಡದೆ, ವಿದ್ಯುತ್ ಸಂಪರ್ಕ ನೀಡದೆ ಇರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇದು ಅಕ್ಷಮ್ಯ, ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಫಲಾನುಭವಿಗಳ ಬಳಿ ಹಣ ಪಡೆಯುತ್ತಿರುವ ದೂರುಗಳು ಕೇಳಿ ಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ದನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ನಾಗರಾಜ್ ಅವರು, ನಿರ್ದಿಷ್ಟ ಪ್ರಕರಣಗಳ ಬಗ್ಗೆ ಶಾಸಕರು ದೂರು ನೀಡಿದರೆ ಕ್ರಮ ನಿಶ್ಚಿತ ಎಂದು ಸ್ಪಷ್ಟಪಡಿಸಿದರು.
ತ್ವರಿತಗೊಳಿಸಲು ಸೂಚನೆ : ಜಿಲ್ಲೆಯಲ್ಲಿ 3.17 ಲಕ್ಷದಷ್ಟು ಎಬಿ-ಎಆರ್‌ಕೆ ಆರೋಗ್ಯ ವಿಮೆ ಕಾರ್ಡು ವಿತರಿಸಲಾಗಿದೆ. ಇದನ್ನು ತ್ವರಿತಗೊಳಿಸಿ ಎಲ್ಲ ಕುಟುಂಬಗಳಿಗೂ ನೀಡಬೇಕು. ಐದು ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡುವ ಈ ಯೋಜನೆ ಹೆಚ್ಚು ಜನರಿಗೆ ತಲುಪುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲ ಆಸ್ಪತ್ರೆಗಳನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ಶೇಕಡಾ 25 ರಷ್ಟು ಸಾಧನೆ ಮಾಡಿರುವುದು ಸಮಾಧಾನ ತರುವ ವಿಷಯವಲ್ಲ. ಇದನ್ನು ಕಾಲಮಿತಿಯೊಳಗೆ ಆಂದೋಲನ ಮಾದರಿಯಲ್ಲಿ ಕಾರ್ಯಕ್ರಮ ಅನುಷ್ಟಾನಕ್ಕೆ ಕ್ರಮ ವಹಿಸಬೇಕು.
ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಈ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದರು. ಹಾಗೆಯೇ ಆಸ್ಪತ್ರೆಗಳಲ್ಲಿ ಈ ಸೇವೆ ಲಭ್ಯವಿದೆ ಎಂಬ ಫಲಕಗಳನ್ನು ಹಾಕುವುದನ್ನು ಕಡ್ಡಾಯಗೊಳಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಕುಡಿಯುವ ನೀರು : ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಳ್ಳಬೇಕು. ಕೇವಲ ಮೂರು ಕಡೆ ಮಾತ್ರ ಕೈಗೊಂಡಿದ್ದೀರಿ. ಜಿಲ್ಲೆಯಲ್ಲಿ ಸಾಕಷ್ಟು ನೀರಿನ ಮೂಲಗಳಿವೆ. ಅವುಗಳನ್ನು ಸರಿಯಾಗಿ ಗುರುತಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು ಹೀಗೆ ಎಲ್ಲಿ ಅವಕಾಶ ಇದೆ ಎಲ್ಲ ಕಡೆ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ನೀರಿನ ಲಭ್ಯತೆ ಆಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. 75 ವರ್ಷ ಆದರೂ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಆಗುತ್ತಿಲ್ಲ ಎಂದರೆ ಅತ್ಯಂತ ವಿಷಾದನೀಯ ಸಂಗತಿ. ಅಧಿಕಾರಿಗಳ ಕೊರತೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಚಿಂತಾಮಣಿ ತಾಲ್ಲೂಕನ್ನು ವಿಶೇಷವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಶೀಘ್ರವೇ ಅಧಿಕಾರಿಗಳು ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದು ಸೂಚನೆ ನೀಡಿದರು.
ಸದ್ಯ ತೊಂದರೆ ಇಲ್ಲ: ಇದೇ ಮೊದಲ ಬಾರಿಗೆ ಬೇಸಿಗೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಇನ್ನೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಲ್ಲ. ಕಳೆದ ಸಲ ಉತ್ತಮ ಮಳೆ ಆಗಿರುವುದು ಇದಕ್ಕೆ ಕಾರಣ. ಮುಂದಿನ ಮೂರು ತಿಂಗಳು ಎಲ್ಲಿಯಾದರೂ ಸಮಸ್ಯೆ ಆದರೆ ತಕ್ಷಣ ಪರಿಹಾರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮೋಟರ್ ಅಳವಡಿಸಬೇಕಿರುವ ಕೊಳವೆಬಾವಿಗಳಿಗೆ ಹದಿನೈದನೇ ಹಣಕಾಸು ಯೋಜನೆ ಅಡಿಯಲ್ಲಿ ಅನುದಾನ ಬಳಕೆ ಮಾಡಲು ಅವಕಾಶವಿದೆ. ಗ್ರಾಮಪಂಚಾಯಿತಿಗಳಿಂದ ವರದಿ ಪಡೆದು ಶೀಘ್ರವೇ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.