ಆಡಲು ಹೋಗಿ ಕಾಲುವೆಗೆ ಬಿದ್ದು ಬಾಲಕಿಯರ ಸಾವು
ರಾಯಚೂರು: ಕಾಲು ಜಾರಿ ಕಾಲುವೆಯಲ್ಲಿ ಬಿದ್ದು, ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಿರ್ಜಾಪುರ ಗ್ರಾಮದಲ್ಲಿ ನಡೆದಿದೆ.
8 ನೇ ತರಗತಿ ಓದುತ್ತಿದ್ದ ಇಂದು(14), ಏಳನೇ ತರಗತಿ ಓದುತ್ತಿದ್ದ ಸುಜಾತ(13) ಮೃತ ಬಾಲಕಿಯರು. ಕಾಲುವೆಯಲ್ಲಿ ಆಟವಾಡಲು ತೆರಳಿದ್ದ ವೇಳೆ ಇಬ್ಬರು ಬಾಲಕಿಯರು ನೀರಿಗೆ ಜಾರಿಬಿದ್ದು ಸಾವನ್ನಪ್ಪಿದ್ದಾರೆ.
ಗ್ರಾಮದಲ್ಲಿ ಬಳಿ ಹಾದು ಹೋಗಿರುವ ಆರ್‌ಡಿಎಸ್(ರಾಜಲಬಂಡಾ ನಾಲೆ ಯೋಜನೆ)ಕಾಲುವೆಯಲ್ಲಿ ಇಬ್ಬರು ಬಾಲಕಿಯರು ಆಟವಾಡಲು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಈಜಲು ಬಾರದೆ ಇಬ್ಬರೂ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಇಡಪಾನೂರು ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ನೀರಲ್ಲಿ ಬಿದ್ದ ಬಾಲಕಿಯರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.