ಕಲರ್‍ಫುಲ್ ಹಳ್ಳಿಫೈಟ್: ಒಂದೇ ಪಂಚಾಯ್ತಿ, ಎರಡು ಪತಿ-ಪತ್ನಿಗೆ ಜೋಡಿಗೆ ವಿಜಯಮಾಲೆ, ಕರಪತ್ರ ಗಂಗಮ್ಮಗೆ ಸೋಲು..!
ಬೆಂಗಳೂರು: ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಫಲಿತಾಂಶ ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆದಿದೆ. ಕೆಲ ಕ್ಷೇತ್ರಗಳಲ್ಲಿ ಮತದಾರರು ಅಚ್ಚರಿಯ ಫಲಿತಾಂಶವನ್ನೂ ನೀಡಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಪ್ರತಿಬಿಂಬ ಎಂದೇ ಬಿಂಬಿತವಾಗಿರುವ ಗ್ರಾಮ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಹಿನ್ನೆಲೆ, ಒಂದೇ ಮತದ ಗೆಲವು, ಟೈ ಆಗಿ ಲಕ್ಕಿ ಡ್ರಾದಲ್ಲಿ ಗೆಲವು ಸಾಧನೆ..ಹೀಗೆ ಹಳ್ಳಿಫೈಟ್ ಕಲರ್‍ಫುಲ್ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.
ಗೆದ್ದ ಪತಿ-ಪತ್ನಿ ಜೋಡಿ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮ ಪಂಚಾಯತ್‍ಗೆ ಸ್ಪರ್ಧೆ ಮಾಡಿದ್ದ ಎರಡು ಜೋಡಿ ಪತಿ ಪತ್ನಿಯರು ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.

ಬೆಳಗೊಳದ 1ನೇ ವಾರ್ಡ್‍ನಿಂದ ಪತ್ನಿ ಅಶ್ವಿನಿ ಗೆದ್ದರೆ, 2ನೇ ವಾರ್ಡ್‍ನಿಂದ ಪತಿ ರವಿಕುಮಾರ್ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಪತಿ ರವಿಕುಮಾರ್ ಮೂರನೆ ಬಾರಿ ಗೆದ್ದರೆ, ಪತ್ನಿ ಅಶ್ವಿನಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ.

ಇದೇ ವೇಳೆ, ಅದೇ ಗ್ರಾಮದ ಮತ್ತೊಂದು ಜೋಡಿ ಸುರೇಶ್ ಹಾಗೂ ಪ್ರಭಾ ಗೆಲುವು ಸಾಧಿಸಿ ಹುಬ್ಬೇರುವಂತೆ ಮಾಡಿದ್ದಾರೆ. 8ನೇ ವಾರ್ಡ್‍ನಿಂದ ಸ್ಪರ್ಧೆ ಮಾಡಿದ್ದ ಪತಿ ಸುರೇಶ್ ಹಾಗೂ ಪತ್ನಿ ಪ್ರಭಾ ಸುರೇಶ್‍ಗೆ ಗ್ರಾಮಸ್ಥರು ಜಯದ ಮಾಲೆ ಹಾಕಿದ್ದಾರೆ. ಸಾಮಾನ್ಯ ಹಾಗೂ ಸಾಮಾನ್ಯ ಮಹಿಳಾ ವರ್ಗದಿಂದ ಇಬ್ಬರು ಆಯ್ಕೆಯಾಗಿರುವುದು ವಿಶೇಷ.
ಗೆದ್ದ ಸಿಪಿಐ(ಎಂ) ಬೆಂಬಲಿತ ಅಭ್ಯರ್ಥಿ
ಮಂಡ್ಯ ಜಿಲ್ಲೆಯ ತಳಗವಾದಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಿಪಿಐ(ಎಂ) ಬೆಂಬಲಿತ ಅಭ್ಯರ್ಥಿ ಟಿ.ಹೆಚ್. ಆನಂದ್ ಗೆಲುವು ಸಾಧಿಸಿದ್ದಾರೆ. ಇವರ ಜತೆಗೆ ಪ್ರಗತಿಪರ ತಂಡದ ಶಿವಮ್ಮ, ಲೀಲಾವತಿ, ಕುಮಾರ, ಸೌಮ್ಯ ಟಿ.ಪಿ. ಜಯಲಕ್ಷ್ಮಿ, ಸಿದ್ದರಾಜು ರೂಪ, ಗುರುಸ್ವಾಮಿ, ಸುಲೋಚನಾ ಸೇರಿದತೆ 10 ಜನರನ್ನ ತಳಗವಾದಿಯ ಮತದಾರರು ಆಯ್ಕೆ ಮಾಡಿ ಕಳಿಸಿದ್ದಾರೆ.

ಕರಪತ್ರದ ಗಂಗಮ್ಮಗೆ ಎರಡು ಕಡೆ ಸೋಲು
ವಿಭಿನ್ನ ಚುನಾವಣಾ ಕರಪತ್ರದಿಂದ ವೈರಲ್ ಆಗಿ ಗಮನಸೆಳೆದಿದ್ದ ಕರಪತ್ರದ ಗಂಗಮ್ಮ ಸ್ಪರ್ಧೆ ಮಾಡಿದ್ದ ಎರಡು ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದಾರೆ.
ತುಮಕೂರು ತಾಲೂಕಿನ ಕಲ್ಕೆರೆ ಮತ್ತು ದೊಡ್ಡಗುಣಿ ಕ್ಷೇತ್ರದ ಸದಸ್ಯ ಸ್ಥಾನಗಳಿಗೆ ಹೆಚ್. ಗಂಗಮ್ಮ ಸ್ಪರ್ಧಿಸಿದ್ದರು. ಆದರೆ, ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದಾರೆ

ದೊಡ್ಡಗುಣಿ ಕ್ಷೇತ್ರದಲ್ಲಿ ಕೇವಲ 2 ಮತಗಳನ್ನು ಪಡೆದಿದ್ದರೆ, ಕಲ್ಕೆರೆ ಕ್ಷೇತ್ರದಲ್ಲಿ ಕನಿಷ್ಠ ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಗೆದ್ದರೆ ಹಾಗೂ ಸೋತರೆ ಏನೇನು ಮಾಡುವೆ ಎಂಬ ಬಗ್ಗೆ ಗಂಗಮ್ಮ ಕರಪತ್ರದಲ್ಲಿ ಮುದ್ರಿಸಿದ್ದರು. ಈ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೂ, ಮತದಾರ ಪ್ರಭುಗಳು ಗಂಗಮ್ಮಗೆ ಸೋಲಿನ ಬಿಸಿ ಮುಟ್ಟಿಸಿದ್ದು, ಕರಪತ್ರದಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







