ಪ್ರಸಕ್ತ ಹಣಕಾಸು ವರ್ಷದ ಜೂನ್ ಅಂತ್ಯಕ್ಕೆ ಕೊನೆಗೊಂಡ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 333 ಕೋಟಿ ರೂಪಾಯಿಗಳಷ್ಟು ನಿವ್ವಳ ಲಾಭ ಗಳಿಸಿದೆ. 2019ರ ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್ ನ ನಿವ್ವಳ ಲಾಭವು 224.43 ಕೋಟಿ ರೂಪಾಯಿಗಳಷ್ಟಿತ್ತು.ಬ್ಯಾಂಕ್ ನ ಒಟ್ಟಾರೆ ವಾರ್ಷಿಕ ವಹಿವಾಟು 15,42,668 ಕೋಟಿ ರೂಪಾಯಿಗಳಿಗೆ ತಲುಪಿದ್ದು, ವಾರ್ಷಿಕ ಶೇ 5ರಷ್ಟು ಹೆಚ್ಚಳ ಸಾಧಿಸಿದೆ.
ಇನ್ನೂ ಬ್ಯಾಂಕ್ ನ ಒಟ್ಟು ಸಾಲ 6,50,127 ಕೋಟಿ ರೂಪಾಯಿಗಳಷ್ಟಿದ್ದು ಶೇ 2ರಷ್ಟು ಏರಿಕೆ ಕಂಡಿದೆ. ಕಾರ್ಪೊರೇಟ್ ಮತ್ತು ಇತರ ವಲಯಗಳಿಗೆ ಶೇ 46.18 ರಷ್ಟು ಸಾಲ ವಿತರಿಸಲಾಗಿದ್ದು, ಕೃಷಿಗೆ ಶೇ 15.7, ರಿಟೇಲ್ ಗೆ ಶೇ 20 ಮತ್ತು ಎಂಎಸ್ ಎಂಇ ವಲಯಕ್ಕೆ ಶೇ 18.2ರಷ್ಟು ಸಾಲ ವಿತರಣೆಯಾಗಿದೆ. ಮುದ್ರಾ ಯೋಜನೆಯಡಿ 14,880 ಕೋಟಿ ರೂಪಾಯಿಗಳ ಸಾಲ ವಿತರಿಸಲಾಗಿದೆ.
ಕಾರ್ಯನಿರ್ವಹಣಾ ಲಾಭವು ವರ್ಷದ ಹಿಂದಿನ 3,918 ಕೋಟಿ ರೂಪಾಯಿಗಳಿಂದ 4,034 ಕೋಟಿ ರೂಪಾಯಿಗಳಿಗೆ ಹೆಚ್ಚಳಗೊಂಡು ವಾರ್ಷಿಕ ಶೇ 3ರಷ್ಟು ಏರಿಕೆ ಕಂಡಿದೆ. ಒಟ್ಟು ಠೇವಣಿಗಳ ಮೊತ್ತವು 8,92,542 ಕೋಟಿ ರೂಪಾಯಿಗಳಿಗೆ ತಲುಪಿ, ಶೇ 7.3ರಷ್ಟು ಹೆಚ್ಚಳ ಸಾಧಿಸಿದೆ.