ಸರ್ಕಾರಿ ಶಾಲೆಗಳಲ್ಲಿ ಏಕರೂಪದ ಸಮವಸ್ತ್ರದ ಬೇಡಿಕೆ – ಅರ್ಜಿ ವಜಾಗೊಳಿಸಿದ ಸುಪ್ರೀಂ…
ದೇಶದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಏಕರೂಪದ ಸಮವಸ್ತ್ರ ನೀಡಬೇಕು ಎಂಬ ಬೇಡಿಕೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಇದು ನ್ಯಾಯಾಲಯಕ್ಕೆ ತರಬೇಕಾದ ವಿಷಯವಲ್ಲ ಎಂದು ಹೇಳಿದೆ.
ಆದರೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೌರವ್ ಭಾಟಿಯಾ, ಇದೊಂದು ಸಾಂವಿಧಾನಿಕ ವಿಚಾರವಾಗಿದ್ದು, ವಿಭಿನ್ನ ಉಡುಗೆ ತೊಡುಗೆ ಶಿಕ್ಷಣ ಹಕ್ಕು ಕಾಯಿದೆಗೆ ವಿರುದ್ಧವಾಗಿರುವುದರಿಂದ ನ್ಯಾಯಾಲಯ ಈ ವಿಷಯವನ್ನು ಪರಿಗಣಿಸಬೇಕು ಎಂದು ವಾದ ಮಂಡಿಸಿದ್ದಾರೆ. ಇದು ಸಾಂವಿಧಾನಿಕ ವಿಷಯವಾಗಿದೆ ಎಂದ ಅವರು ದಯವಿಟ್ಟು ಪುಟ ಸಂಖ್ಯೆ 58 ಅನ್ನು ನೋಡಿ. ಸಿಬ್ಬಂದಿ ಮತ್ತು ಶಿಕ್ಷಕರಿಗೆ ಸಮವಸ್ತ್ರದ ಬಗ್ಗೆ ಚರ್ಚೆ ನಡೆದಿದೆ. ನೀವು ಯಾವುದೇ ಆದೇಶವನ್ನು ನೀಡಬಹುದು. ಶಿಕ್ಷಣದ ಹಕ್ಕಿನಡಿಯಲ್ಲಿ ಉಡುಪಿನಲ್ಲಿ ಏಕರೂಪತೆ ಇರಬೇಕು ಮತ್ತು ಶಿಸ್ತು ಇರಬೇಕು ಎಂದಿದ್ದಾರೆ.
ಆದರೆ, ಅವರ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಇದು ನ್ಯಾಯಾಲಯ ತೀರ್ಮಾನಿಸಬೇಕಾದ ವಿಷಯವಲ್ಲ ಎಂದು ಹೇಳಿದೆ. ಇದಾದ ಬಳಿಕ ನ್ಯಾಯಾಲಯದಿಂದ ಅನುಮತಿ ಪಡೆದು ಅರ್ಜಿದಾರರು ಅರ್ಜಿ ಹಿಂಪಡೆದಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.