ರಷ್ಯಾ ಪ್ರವಾಸ ಕೈಗೊಂಡ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಹೊಸದಿಲ್ಲಿ, ಜೂನ್ 23: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ದಿನಗಳ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಸೋವಿಯತ್ ರಾಷ್ಟ್ರ ಜರ್ಮನಿ ವಿರುದ್ಧ ಸಾಧಿಸಿದ ಗೆಲುವಿನ ವಿಜಯೋತ್ಸವದ 75ನೇ ವಿಕ್ಟರಿ ಪರೇಡ್ ನಲ್ಲಿ ಪಾಲ್ಗೊಳ್ಳಲು ಅವರು ರಷ್ಯಾ ಪ್ರವಾಸ ಕೈಗೊಂಡಿದ್ದು, ಮೂರು ದಿನಗಳ ಈ ಪ್ರವಾಸದಲ್ಲಿ ರಷ್ಯಾದ ಸೇನಾ ಉನ್ನತಾಧಿಕಾರಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ.
ರಾಜನಾಥ್ ಸಿಂಗ್ ಅವರು ರಷ್ಯಾ ಪ್ರವಾಸದ ಬಗ್ಗೆ ಟ್ವೀಟ್ ಮಾಡಿದ್ದು, ಮೂರು ದಿನಗಳ ಅವಧಿಗೆ ಮಾಸ್ಕೋಗೆ ತೆರಳುತ್ತಿದ್ದು, ಮಾಸ್ಕೋದ 75ನೇ ವರ್ಷದ ವಿಕ್ಟರಿ ಪರೇಡ್ನಲ್ಲಿ ಭಾಗವಹಿಸುತ್ತಿದ್ದೇನೆ. ಭಾರತ- ರಷ್ಯಾ ನಡುವಿನ ರಕ್ಷಣಾ ಮತ್ತು ವ್ಯೂಹಾತ್ಮಕ ಪಾಲುದಾರಿಕೆ ವಿಚಾರವಾಗಿ ಮಾತುಕತೆ ನಡೆಸಲು ರಷ್ಯಾ ಸರ್ಕಾರ ಅವಕಾಶ ಮಾಡಿಕೊಡಲಿದೆ ಎಂದು ಹೇಳಿಕೊಂಡಿದ್ದಾರೆ.
ಭಾರತದ ಮೂರು ಸೇನಾಪಡೆಗಳ 75 ಸದಸ್ಯರ ತಂಡ ಈಗಾಗಲೇ ಮಾಸ್ಕೋ ತಲುಪಿದ್ದು, ಭಾರತೀಯ ತಂಡವು ಚೀನಾ ಸೇರಿದಂತೆ 11 ರಾಷ್ಟ್ರಗಳ ತಂಡಗಳೊಂದಿಗೆ ರಷ್ಯಾದ ವಿಜಯೋತ್ಸವದ ಪರೇಡ್ ನಲ್ಲಿ ಭಾಗವಹಿಸಲಿದೆ.
ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಹಾಗಾಗಿ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗಿದ್ದರೂ, ಅದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ರಾಜನಾಥ್ ಸಿಂಗ್ ಅವರು ರಷ್ಯಾ ಪ್ರವಾಸಕ್ಕೂ, ಚೀನಾ ಜತೆಗಿನ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ. ಎರಡು ದೇಶಗಳ ನಡುವಿನ ದಶಕಗಳ ಸೇನಾ ಸಂಬಂಧದ ಹಿನ್ನಲೆಯಲ್ಲಿ ರಾಜನಾಥ್ ಸಿಂಗ್ ಅವರು ರಷ್ಯಾದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ರಷ್ಯಾ, ಭಾರತ ಮತ್ತು ಚೀನಾ (ಆರ್‌ಐಸಿ) ವಿದೇಶಾಂಗ ಸಚಿವರ ವಾಸ್ತವ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾಗವಹಿಸಲಿದ್ದಾರೆ.