ಸಂಸತ್ತಿನಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆ ತಮಿಳರನ್ನು ಅವಮಾನಿಸುವ ರೀತಿಯದ್ದಾಗಿತ್ತು ಎಂದು ಡಿಎಂಕೆ ಸಂಸದೆ ಕನಿಮೋಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಕನಿಮೋಳಿ, ನಮ್ಮ ಸಂಸದರನ್ನು ನೀವು ಅನಾಗರಿಕರೆಂದು ಕರೆಯುತ್ತಿದ್ದೀರಾ? ನಿಮ್ಮ ಈ ಮಾತುಗಳು ತಮಿಳು ಸಮುದಾಯದ 8 ಕೋಟಿ ಜನರಿಗೆ ನೋವುಂಟು ಮಾಡಿವೆ. ಒಂದು ಕಡೆ ನಮ್ಮ ತೆರಿಗೆಗಳನ್ನು, ನಮ್ಮ ಸೇವೆಗಳನ್ನು, ನಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆದುಕೊಳ್ಳುತ್ತಿರುವಾಗ, ನಮ್ಮನ್ನು ಅವಮಾನಿಸುವ ಹಕ್ಕು ನಿಮಗೆ ಹೇಗೆ ಸಿಗುತ್ತದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ತಮಿಳು ಸಮುದಾಯಕ್ಕೆ ಆದ ಅಪಮಾನ, ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ. ಕೇಂದ್ರ ಸಚಿವರು ತಕ್ಷಣ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು. ಕನಿಮೋಳಿ ಅವರ ಈ ಟೀಕೆ ಇದೀಗ ತಮಿಳುನಾಡು ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.