ಅದೃಷ್ಟ ಕೆಲವೊಂದು ಬಾರಿ ಬೆನ್ನ ಹಿಂದಿದ್ರೂ ಗೊತ್ತಾಗಲ್ಲ… ಹಾಗೇ ರಜತ್ ಪಟೀದಾರ್ ಕೂಡ ಕನಸಿನಲ್ಲೂ ಆರ್‌ಸಿಬಿಯ ನಾಯಕನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಅಷ್ಟೇ ಯಾಕೆ, ಕ್ಯಾಪ್ಟನ್ ಆಗಿ ಐಪಿಎಲ್ ಟ್ರೋಪಿ ಎತ್ತಿ ಹಿಡಿಯುತ್ತೇನೆ ಎಂಬ ಭ್ರಮೆಯಲ್ಲೂ ಇರಲಿಲ್ಲ. ಯಾಕಂದ್ರೆ ಕಳೆದ ನಾಲ್ಕು ವರ್ಷಗಳಲ್ಲಿ ರಜತ್‍ಗೆ ಆಗಿದ್ದು ಎಲ್ಲವೂ ಅನಿರೀಕ್ಷಿತ.. ಆಕಸ್ಮಿಕ.. ಆಶ್ಚರ್ಯ..ಅನುಭೂತಿ..!
ಹಾಗೇ ನೋಡಿದ್ರೆ ರಜತ್ ಪಟೀದಾರ್ ಆರ್‌ಸಿಬಿಗೆ ಎಂಟ್ರಿಯಾಗಿದ್ದೇ ಅನಿರೀಕ್ಷಿತ. 2021ರಲ್ಲಿ 20 ಲಕ್ಷ ಮೂಲ ಬೆಲೆಗೆ ಆರ್‌ಸಿಬಿಯ ಡಗೌಟ್ ಸೇರಿಕೊಂಡಿದ್ರು ರಜತ್. ಮೊದಲ ಸೀಸನ್‍ನಲ್ಲಿ 4 ಪಂದ್ಯಗಳಲ್ಲಿ 71 ರನ್ ಪೇರಿಸಿದ್ದಷ್ಟೇ. ಆದ್ರೆ ಆರ್‌ಸಿಬಿ ಮುಂದಿನ ಸೀಸನ್‍ಗೆ ಪಟೀದಾರ್‌ನ ರಿಟೇನ್ ಮಾಡಲು ಮನಸ್ಸು ಮಾಡಲಿಲ್ಲ. ಆದ್ರೂ ಹರಾಜಿನಲ್ಲಿ ಖರೀದಿ ಮಾಡುವ ಭರವಸೆ ನೀಡಿತ್ತು. ಆದ್ರೆ ಹರಾಜಿನಲ್ಲಿ ರಜತ್‌ನ ಖರೀದಿ ಮಾಡದೇ ಮಾತಿಗೆ ತಪ್ಪಿತ್ತು. ಈ ಬಿಡ್ಡಿಂಗ್‌ನಲ್ಲಿ ರಜತ್ ಪಟೀದಾರ್ ಹೆಸರಿನ ಮೇಲೆ ಅನ್‍ಸೋಲ್ಡ್ ಸೀಲ್ ಕೂಡ ಬಿತ್ತು.
ಇದು ರಜತ್ ಪಟೀದಾರ್ ಮನಸ್ಸನ್ನು ಘಾಸಿಗೊಳಿಸಿತ್ತು. ಇನ್ಯಾವತ್ತೂ ಆರ್‌ಸಿಬಿ ಪರ ಆಡಬಾರದು ಎಂಬ ಕಠಿಣ ನಿಲುವನ್ನು ಮನಸ್ಸಿನಲ್ಲೇ ತೆಗೆದುಕೊಂಡಿದ್ದ ಪಟೀದಾರ್. ಐಪಿಎಲ್ ಟೂರ್ನಿಯಲ್ಲಿ ಆಡುವ ಅವಕಾಶ ಕೈ ತಪ್ಪಿರುವ ನಿರಾಸೆಯ ನಡುವೆಯೇ ಮದುವೆಯಾಗಲು ರೆಡಿಯಾಗಿದ್ದ. ಅಷ್ಟರಲ್ಲೇ ಆಕಸ್ಮಿಕವಾಗಿ ಆರ್‌ಸಿಬಿ ಮ್ಯಾನೇಜ್‍ಮೆಂಟ್‍ನಿಂದ ಕರೆ ಬಂತು. ಲುನ್ವಿತ್ ಸಿಸೋಡಿಯಾ ಗಾಯಗೊಂಡಿದ್ದಾನೆ, ಆತನ ಸ್ಥಾನಕ್ಕೆ ನಿನ್ನನ್ನು ಆಯ್ಕೆ ಮಾಡಿದ್ದೇವೆ ಎಂದು ಆರ್‌ಸಿಬಿ ಮ್ಯಾನೇಜ್‍ಮೆಂಟ್ ಹೇಳಿದಾಗ ರಜತ್ ಹಿಂದೆ ಮುಂದೆ ನೋಡದೇ ಸರಿ ಅಂದುಬಿಟ್ಟ. ಅಷ್ಟೇ ಅಲ್ಲ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ.
ಯಾಕಂದ್ರೆ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡದಲ್ಲಿರುವುದೇ ದೊಡ್ಡ ವಿಷಯ. ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೆ ಆರ್‌ಸಿಬಿ ಪರ ಆಡಬೇಕು ಎಂಬ ತುಡಿತವಿರುತ್ತದೆ. ಹೀಗಾಗಿಯೇ ಈ ಅವಕಾಶವನ್ನು ರಜತ್ ಸರಿಯಾಗಿಯೇ ಬಳಸಿಕೊಂಡ. ಲಕ್ನೋ ವಿರುದ್ಧ ಸ್ಫೋಟಕ ಶತಕ ಸಿಡಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡ. ಆಡಿರುವ 8 ಪಂದ್ಯಗಳಲ್ಲಿ 333 ರನ್ ದಾಖಲಿಸಿದ್ದ. ಆದ್ರೆ ದುರಾದೃಷ್ಟವೆಂದ್ರೆ 2023ರ ಐಪಿಎಲ್‍ನಲ್ಲಿ ಗಾಯದ ಕಾರಣ ಟೂರ್ನಿಯಿಂದಲೇ ದೂರ ಉಳಿದುಕೊಳ್ಳಬೇಕಾಯ್ತು.
ಬಳಿಕ 2024ರ ಸೀಸನ್‌ಗೆ ಎಂಟ್ರಿ ಕೊಟ್ಟ ಪಟೀದಾರ್ 15 ಪಂದ್ಯಗಳಲ್ಲಿ ಐದು ಅರ್ಧಶತಕಗಳ ಸಹಾಯದಿಂದ 395 ರನ್ ಗಳಿಸಿ ಆರ್‌ಸಿಬಿ ತಂಡದಲ್ಲಿ ಸ್ಥಾನವನ್ನು ಗಟ್ಟಿ ಮಾಡಿಕೊಂಡ. ವಿಶೇಷ ಅಂದ್ರೆ 2021 ರಿಂದ 2024 ರವರಗೆ ಪ್ರತಿ ಸೀಸನ್‍ನಲ್ಲಿ ಪಟೀದಾರ್ ಪಡೆದುಕೊಂಡ ಸಂಭಾವನೆ ಕೇವಲ 20 ಲಕ್ಷ ರೂಪಾಯಿ ಅಷ್ಟೇ..!
ಆದ್ರೆ 2025ರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಪಟೀದಾರ್‌ಗೆ 11 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಮುಂದೆ ಆರ್‌ಸಿಬಿ ನಾಯಕನನ್ನಾಗಿ ಘೋಷಣೆ ಮಾಡಿದಾಗ ಆಶ್ಚರ್ಯಚಕಿತರಾಗಿದ್ದರು. ಆದ್ರೆ ಆರ್‌ಸಿಬಿ ಮ್ಯಾನೇಜ್‍ಮೆಂಟ್‍ಗೆ ಈ ಹುಡುಗನ ಸಾಮರ್ಥ್ಯದ ಬಗ್ಗೆ ಭರವಸೆಯನ್ನಿಟ್ಟುಕೊಂಡಿತ್ತು. ಕೋಚ್ ಆಂಡಿ ಫ್ಲವರ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್, ರಜತ್‍ಗೆ ಮಾರ್ಗದರ್ಶನ ನೀಡಿದ್ರು. ಇದರ ಪರಿಣಾಮ ರಜತ್ ಕೂಲ್ ಆಗಿಯೇ ತಂಡವನ್ನು ಮುನ್ನಡೆಸಿಕೊಂಡು ಹೋದ. ಸೋಲು, ಗೆಲುವಿನ ಮೆಟ್ಟಿಲು ಹತ್ತಿಕೊಂಡು ಹೋಗುವಾಗ ನಾನಾ ಟೀಕೆಗಳು ಎದುರಾಗಿದ್ದವು. ಯಾಕಂದ್ರೆ ರಜತ್ ಪಟೀದಾರ್ ಮುನ್ನಡೆಸುತ್ತಿರುವುದು ವಿಶ್ವ ಕ್ರಿಕೆಟ್‍ನ ಕೋಟ್ಯಂತರ ಅಭಿಮಾನಿಗಳ ಉಸಿರಾಗಿರುವ ತಂಡವನ್ನು. ಹೀಗಾಗಿ ರಜತ್‍ನ ಪ್ರತಿ ಹೆಜ್ಜೆಯನ್ನಿಡುವಾಗಲೂ ಎಚ್ಚರಿಕೆಯಿಂದಿರಬೇಕಿತ್ತು.
ಅದರಲ್ಲೂ 18 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಬೇಕಾಗಿತ್ತು. ಜೊತೆಗೆ ವಿರಾಟ್‍ಗೋಸ್ಕರ ಈ ಬಾರಿ ಕಪ್ ಗೆಲ್ಲಲೇಬೇಕು ಎಂಬ ಹಠ ಇಡೀ ಆರ್‌ಸಿಬಿ ತಂಡದಲ್ಲಿತ್ತು. ಕಳೆದ 17 ವರ್ಷಗಳಿಂದ ಗೆಲುವಿನ ಗೋಪುರಕ್ಕೆ ಐಪಿಎಲ್ ಟ್ರೋಫಿಯ ಮುಕುಟವನ್ನಿಡಲು ಹೆಣಗಾಡುತ್ತಿತ್ತು. ಸುಮಾರು 14 ವರ್ಷ ಫೌಂಡೇಶನ್, ಗೋಡೆ ಕಟ್ಟುವ ಹಂತದಲ್ಲಿ ಕುಸಿದು ಬೀಳುತ್ತಿತ್ತು. ಇನ್ನು ಮೂರು ಬಾರಿ ಗೋಪುರಕ್ಕೆ ಮುಕುಟವನ್ನಿಡಲು ಹೋದಾಗ ಜಾರಿಬೀಳಬೇಕಾಯ್ತು.
ಆದ್ರೆ ಈ ಬಾರಿ ಹಾಗಾಗಲಿಲ್ಲ. ಗೋಡೆ ಕಟ್ಟುವ ಹಂತದಲ್ಲಿ ಜಾರಿಬಿದ್ರೂ ಅದನ್ನು ಸರಿಪಡಿಸಿಕೊಂಡ ಆರ್‌ಸಿಬಿಯ ಮೇಸ್ತ್ರಿ ರಜತ್ ಪಟೀದಾರ್, ಆರ್‌ಸಿಬಿಯ ಗೆಲುವಿನ ಗೋಪುರದಲ್ಲಿ ಐಪಿಎಲ್ ಟ್ರೋಫಿಯ ಮುಕುಟ ಇದ್ದೇ ಇರುತ್ತೆ ಎಂಬ ವಿಶ್ವಾಸದಲ್ಲಿದ್ದರು. ಗೋಪುರ ಕಟ್ಟುವ ವೇಳೆ ಅಂದ್ರೆ ಕ್ವಾಲಿಫೈಯರ್ ಮತ್ತು ಫೈನಲ್‍ನಲ್ಲಿ ಲಯಬದ್ಧವಾಗಿ ಆಡಿ ಕೊನೆಗೂ ಆರ್‌ಸಿಬಿಯ ಗೆಲುವಿನ ಗೋಪುರದಲ್ಲಿ ಐಪಿಎಲ್ ಟ್ರೋಫಿ ಹೊಳೆಯುವಂತೆ ಮಾಡಿದ್ದು ರಜತ್ ಪಟೀದಾರ್. ಅಂದು ಅನ್‌ಸೋಲ್ಡ್ ಪ್ಲೇಯರ್.. ಇಂದು ಅನ್‍ಸಂಗ್ ಹೀರೋ..! ಇದು ದಿವ್ಯಾನುಭೂತಿ ಅಲ್ಲದೆ ಮತ್ತೇನು..?
ಸನತ್ ರೈ