ರಾಯಚೂರು: ಟಿಶ್ಯೂ ಪೇಪರ್ (Tissue Paper) ವಿಚಾರಕ್ಕೆ ಶುರುವಾದ ಜಗಳ ಇಬ್ಬರು ಯುವಕರಿಗೆ ಚಾಕು ಇರಿತದಲ್ಲಿ ಕೊನೆಯಾಗಿದೆ.
ಪಾನ್ ಶಾಪ್ (Pan Shop) ಮಾಲೀಕ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ನಡೆದಿದೆ. ವೀರೇಶ್ ಚಾಕು ಇರಿದ ಪಾನ್ ಶಾಪ್ ಮಾಲೀಕ ಎನ್ನಲಾಗಿದೆ. ಇಬ್ಬರು ಯುವಕರನ್ನು ಅಟ್ಟಾಡಿಸಿ ವೀರೇಶ್ ಚಾಕು ಇರಿದಿದ್ದಾನೆ. ಗಲಾಟೆಯಲ್ಲಿ ರಮೇಶ್ ಹಾಗೂ ಸತ್ತರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಮೇಶ್ ಹಾಗೂ ಸತ್ತರ್ ಸ್ನೇಹಿತರ ಜೊತೆ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಡಾಬಾದ ಒಳಗಡೆ ಬಂದಿದ್ದ ಪಾನ್ ಶಾಪ್ ಮಾಲೀಕ ವಿರೇಶ್‌ನನ್ನು ಕಂಡು ವೇಟರ್ ಟಿಶ್ಯೂ ಪೇಪರ್ ಕೊಡು ಎಂದು ಕೇಳಿದ್ದಾರೆ. ಆಗ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದೆ. ಈರುಳ್ಳಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ವೀರೇಶ್ ಯುವಕರಿಗೆ ಇರಿದಿದ್ದಾನೆ.
ಗಲಾಟೆ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಗಾಯಾಳುಗಳಿಗೆ ಮಾನ್ವಿ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಯಿನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.








