ಅಮೆರಿಕ ಅಧ್ಯಕ್ಷ ಚುನಾವಣೆ: ಟ್ರಂಪ್ ನಂತರದ ಸ್ಥಾನದಲ್ಲಿ ವಿವೇಕ್
US Presidential Election: Vivek takes second place after Trump
ಜಗತ್ತಿನ ದೊಡ್ಡಣ್ಣ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಜ್ಜಾಗುತ್ತಿದೆ. ಈ ಚುನಾವಣೆ ನಡೆದಾಗಲೂ ಅಲ್ಲೊಂದು ಭಾರತದ ನಂಟು ಇದ್ದೇ ಇರುತ್ತದೆ. ಈ ಬಾರಿಯೂ, ಅಂದರೆ 2024ರ ಚುನಾವಣೆಗೂ ಭಾರತದ ನಂಟು ಜೋರಾಗಿಯೇ ಇದೆ. ಹೌದ ಈ ಬಾರಿಯ ಚುನಾವಣೆಯಲ್ಲೂ ಭಾರತ ಮೂಲದ ವಿವೇಕ್ ಗಣಪತಿ ರಾಮಸ್ವಾಮಿ ಎಂಬ 38ರ ಹರೆಯದ ವ್ಯಕ್ತಿಯ ಹೆಸರೂ ಮುನ್ನೆಲೆಗೆ ಬಂದಿದೆ. 2024ರ ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ವಿವೇಕ್ ಕಣಕ್ಕಿಳಿದಿದ್ದಾರೆ. ಬೃಹತ್ ವಾಣಿಜ್ಯೋದ್ಯಮಿಯಾಗಿ, ತಮ್ಮ ಮಾತಿನ ಶೈಲಿಯಿಂದಲೇ ಗುರುತಿಸಿಕೊಂಡಿರುವ ವಿವೇಕ್ ಬಗ್ಗೆ ಎಲಾನ್ ಮಸ್ಕ್ ಸಹ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದಾರೆ.
ಇದೀಗ ಈ ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿ ಗಮನ ಸೆಳೆವ ಬೆಳವಣಿಗೆಯೊಂದು ನಡೆದಿದೆ. ರಿಪಬ್ಲಿಕನ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಉದ್ಯಮಿ ವಿವೇಕ್ ರಾಮಸ್ವಾಮಿ ಎರಡನೇ ಸ್ಥಾನಕ್ಕೇರಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿದ್ದು, ಒಂದು ವೇಳೆ ಚುನಾವಣೆಗೂ ಮೊದಲು ಟ್ರಂಪ್ ಶಿಕ್ಷೆಗೆ ಒಳಗಾದರೆ ವಿವೇಕ್ ಅವರಿಗೆ ಅವಕಾಶದ ಬಾಗಿಲುಗಳು ತೆರೆಯಲಿವೆ. ರಿಪಬ್ಲಿಕನ್ ಪಕ್ಷದಲ್ಲಿ ಶೇ.56ರಷ್ಟು ಮತ ಗಳಿಸಿಕೊಂಡಿ ರುವ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಪಕ್ಷದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ.
ಶೇ.10ರಷ್ಟು ಮತಗಳನ್ನು ಪಡೆದು ಕೊಂಡಿರುವ ವಿವೇಕ್ ರಾಮಸ್ವಾಮಿ ಮತ್ತು ಫ್ಲೋರಿಡಾದ ಗವರ್ನರ್ ರಾನ್ ಡೆಸ್ಯಾಂಟಿಸ್ 2ನೇ ಸ್ಥಾನದಲ್ಲಿದ್ದಾರೆ. ಜೂನ್‌ನಲ್ಲಿ ಶೇ.21ರಷ್ಟು ಮತ ಪಡೆದುಕೊಂಡಿದ್ದ ಡೆಸ್ಯಾಂಟಿಸ್ ಮತ ಇದೀಗ ಕುಸಿತ ಕಂಡಿದೆ. ಹೀಗಾಗಿ ವಿವೇಕ್ ಅವರು ಟ್ರಂಪ್ ಬಳಿಕ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿ ಎನ್ನಲಾಗುತ್ತಿದೆ.
ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ವೇಳೆ ಶಿಕ್ಷೆಗೆ ಒಳಗಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡರೆ, ಆ ಅವಕಾಶ ಎರಡನೇ ಸ್ಥಾನದಲ್ಲಿರುವ ವಿವೇಕ್‌ಗೆ ಲಭ್ಯವಾಗಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾರು ಈ ವಿವೇಕ ರಾಮಸ್ವಾಮಿ
ವಿವೇಕ್ ಅವರು ಅಮೆರಿಕಕ್ಕೆ ವಲಸೆ ಹೋದ ಕೇರಳ ಮೂಲದ ದಂಪತಿಗಳ ಮಗನಾಗಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಬಯೋಲಜಿ ವಿಷಯದಲ್ಲಿ ಪದವಿ ಪಡೆದು, ಬಳಿಕ ಯಾಲೆ ವಿವಿಯಲ್ಲಿ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬಯೋಟೆಕ್ ಕಂಪೆನಿ ಶುರು ಮಾಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ರಾಮಸ್ವಾಮಿ, ಇದರಲ್ಲಿ ಗೆದ್ದಿದ್ದಾರೆ.
ಇತ್ತೀಚಿನವರೆಗೂ ವಿವೇಕ್ ರಾಮಸ್ವಾಮಿ ಅಂಥ ದೊಡ್ಡ ಸುದ್ದಿಯಲ್ಲಿ ಏನಿರಲಿಲ್ಲ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ರೇಸ್‌ನಲ್ಲಿ ಇದ್ದವರ ಪೈಕಿ ಎಲ್ಲರಲ್ಲಿ ಒಬ್ಬರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರ ಭಾಷಣ, ಇವರ ನೀತಿಗಳು ರಿಪಬ್ಲಿಕನ್ ಪಕ್ಷದ ಸದಸ್ಯರಿಗೆ ಹಿಡಿಸುತ್ತಿವೆ. ಹೀಗಾಗಿ ದಿಢೀರನೇ ಟ್ರಂಪ್ ಆನಂತರದ ಸ್ಥಾನಕ್ಕೆ ರಾಮಸ್ವಾಮಿ ಏರಿದ್ದಾರೆ.