ವಾಷಿಂಗ್ಟನ್ ; ಕಿಲ್ಲರ್ ಕೊರೊನಾ ವೈರಸ್ ಸೋಂಕಿಗೆ ತತ್ತರಿಸಿರುವ ಅಮೆರಿಕಾಗೆ ವಲಸೆ ಬರುವ ಹೊರ ದೇಶದವರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.
ಈ ಕುರಿತ ಕಾರ್ಯಕಾರಿ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷರು, ಅಗೋಚರ ವೈರಿಯಿಂದ ದಾಳಿ ಹಿನ್ನಲೆಯಲ್ಲಿ, ಅಮೆರಿಕದ ನಮ್ಮ ಮಹಾಜನತೆ ಉದ್ಯೋಗಗಳನ್ನು ರಕ್ಷಿಸಬೇಕಾದ ಅಗತ್ಯವಿರುವುದರಿಂದ ಅಮೆರಿಕಕ್ಕೆ ಹೊರಗಿನಿಂದ ವಲಸೆ ಬರುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ಎಕ್ಸಿಕ್ಯೂಟಿವ್ ಆರ್ಡರ್ ಗೆ ನಾನು ಸಹಿ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಟ್ರಂಪ್ ನಿರ್ಧಾರದಿಂದಾಗಿ ಉದ್ಯೋಗ, ವ್ಯಾಸಂಗ ಮತ್ತಿತರ ಉದ್ದೇಶಗಳಿಗಾಗಿ ಅಮೆರಿಕಕ್ಕೆ ತೆರಳಬೇಕಿದ್ದ ಲಕ್ಷಾಂತರ ಭಾರತೀಯರ ಭವಿಷ್ಯ ಅತಂತ್ರವಾಗಿದೆ. ಅಲ್ಲದೆ, ಅಮೆರಿಕದಲ್ಲಿರುವ ಅಸಂಖ್ಯಾತ ಭಾರತೀಯರೂ ಕೂಡ ಇದರಿಂದ ಭಾರೀ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.
ಕೊರೊನಾ ಹಾವಳಿಯಿಂದಾಗಿ ಲಕ್ಷಾಂತರ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದು ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಅವರ ಹಿತಾಸಕ್ತಿ ರಕ್ಷಣೆಗಾಗಿ ಅನ್ಯ ದೇಶಗಳ ವಲಸಿಗರಿಗೆ ನಿರ್ಬಂಧ ಹೇರಲು ಟ್ರಂಪ್ ಮುಂದಾಗಿದ್ದಾರೆ. ಅಮೆರಿಕದ ಬಹುತೇಕ ಎಲ್ಲ 50 ರಾಜ್ಯಗಳಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಅಮೆರಿಕನ್ನರು ಉದ್ಯೋಗದಲ್ಲಿದ್ದಾರೆ. ಸರ್ಕಾರೇತರ ಮತ್ತು ಇತರ ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯ ಅಮೆರಿಕನ್ನರಿಗೆ ಉದ್ಯೋಗ ನೀಡಬೇಕೆಂಬ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದ್ದು, ಭಾರತೀಯರು ಉದ್ಯೋಗ ಕಳೆದುಕೊಳ್ಳಲಿದ್ದು, ಅವರ ಭವಿಷ್ಯ ಡೋಲಾಯಮಾನವಾಗಲಿದೆ.








