UP Assembly Election 2022: ಮಾಯವಾದ್ರಾ ಮಾಯಾವತಿ..?
ಒಂದು ಕಾಲದಲ್ಲಿ ರಾಜ ಗಾಂಭಿರ್ಯದಿಂದ ಯುಪಿ ರಾಜಕೀಯದಲ್ಲಿ ತಮ್ಮದೇಯಾದ ಮುದ್ರೆ ಒತ್ತಿದ್ದ ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಇಂದು ಮೌನ ಪ್ರೇಕ್ಷಕರಂತೆ ನಿಂತಿದ್ದಾರೆ. ಆ ಮೌನದ ಹಿಂದೆ ಯಾವ ಮಾಯೆ ಇದೆ ಎಂಬುದು ಯಾರ ಅಂದಾಜಿಗೂ ಸಿಗುತ್ತಿಲ್ಲ. ಒನ್ಸ್ ಅಪಾನ್ ಎ ಟೈಂ ಮಾಯಾವತಿ ಯಾರ ಊಹೆಗೂ ನಿಲುಕದ ರೀತಿಯಲ್ಲಿ ಯುಪಿ ಜನರನ್ನು ತಮ್ಮ ಮಾಯೆಯಲ್ಲಿ ಇರಿಸಿಕೊಂಡಿದ್ದರು. ಅಗ್ರವರ್ಣಿಯರು – ದಲಿತರು ಎಂಬ ಸೋಶಿಯಲ್ ಇಂಜಿನಿರಿಂಗ್ ವ್ಯೂಹದ ಮೂಲಕ ಘಟಾಟುಘಟಿ ರಾಜಕೀಯ ಚಟ್ಟಿಗಳಿಗೆ ಮಾಯಾವತಿ ಹೊಸ ಪಾಠಗಳನ್ನು ಕಲಿಸಿಕೊಟ್ಟಿದ್ದರು. ಅಲ್ಲದೇ ಮೊದಲ ದಲಿತ ಮುಖ್ಯಮಂತ್ರಿ ಎಂದು ಚರಿತ್ರೆ ಸೃಷ್ಠಿಸಿದ್ದರು.
ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರು ಶಾಶ್ವತ ಶತ್ರುಗಳಲ್ಲ ಎಂಬ ಸೂತ್ರದೊಂದಿಗೆ ಮಾಯಾವತಿ, ಆಪ್ತ ಸ್ನೇಹಿತರನ್ನಾದರೂ ಬದಿಗೆ ಸರಿಸುತ್ತಾರೆ. ಪರಮ ಶತ್ರುಗಳೊಂದಿಗೆ ಕೈ ಜೋಡಿಸುತ್ತಾರೆ. ಸಾಮಾಜಿಕ ಕೋರ್ಡ್ ನೊಂದಿಗೆ ಯುಪಿ ಸೇರಿದಂತೆ ದೇಶ ರಾಜಕೀಯದಲ್ಲೂ ಮಾಯಾವತಿ ಬೆಳೆದು ನಿಂತರು. ಅಭಿಮಾನಿಗಳಿಂದ ಬೆಹಾನ್ ಜೀ ಅಂತಾ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಮಾಯಾವತಿ, ಇಂದು ಕಮಕ್ ಕಿಮಕ್ ಎನ್ನದೇ ಮೌನಕ್ಕೆ ಶರಣಾಗಿದ್ದಾರೆ. ಯುಪಿಯಲ್ಲಿ ಬಿಜೆಪಿ ಮತ್ತು ಎಸ್ಪಿ ನಡುವೆಯೇ ಪ್ರಮುಖ ಪೈಪೋಟಿ ಏರ್ಪಟ್ಟಿದ್ದು, ಚುನಾವಣೆ ಕಣ ರಂಗೇರುತ್ತಿದ್ದರೆ, ಮಾಯಾವತಿಯ ಮೌನದ ಹಿಂದಿನ ರಹಸ್ಯವೇನು ಅಂತಾ ಯಾರಿಗೂ ಅರ್ಥವಾಗುತ್ತಿಲ್ಲ.
ರಾಜಕೀಯದಲ್ಲಿ ಅತ್ಯಂತ ಅನುಭವಸ್ಥರು, ಅತ್ಯಂತ ಶಕ್ತಿಯುವ ಮಹಿಳೆ ಎಂಬ ಅಂತರ್ಜಾತಿಯ ಹೆಗ್ಗುರಿತು ಹೊಂದಿರುವ ನಾಯಕಿ, ಒಂದು ಕಾಲದಲ್ಲಿ ಪ್ರಧಾನಿ ಅಭ್ಯರ್ಥಿ ಎಂಬಂತೆ ಬಿಂಬಿತವಾದ ಮಾಯಾವತಿ, ಪ್ರಸ್ತುತದ ಯುಪಿ ಚುನಾವಣೆಯಲ್ಲಿ ಮೌನ ವಹಿಸಿರೋದು ಯಾಕೆ..? ಎಂಬುದು ಸದ್ಯದ ಕುತೂಹಲವಾಗಿದೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 19 ವಿಧಾನಸಭಾ ಸ್ಥಾನಗಳಿಗೆ ತೃಪ್ತಿಯಾಗಿದ್ದ ಮಾಯಾವತಿ 2019ರ ಲೋಕಸಭೆ ಚುನಾವಣೆಯಲ್ಲಿ ತನ್ನ ಬದ್ಧ ವೈರಿ ಎಸ್ಪಿ ಜತೆ ಮೈತ್ರಿ ಮಾಡಿಕೊಂಡು 10 ಸ್ಥಾನಗಳನ್ನು ಗಳಿಸಲು ಶಕ್ತರಾಗಿದ್ದರು.
ಆದ್ರೆ ಈ ಬಾರಿಯ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿಯವರ ಪಕ್ಷ ದೊಡ್ಡದಾಗಿ ಕಾಣುತ್ತಿಲ್ಲ. ಚುನಾವಣಾ ಪ್ರಚಾರ, ಪ್ರಣಾಳಿಕೆ ಬಿಡುಗಡೆ ಅಥವಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮೊದಲ ಜೋಷ್ ಕಾಣಿಸುತ್ತಿಲ್ಲ. ಆದರೂ, ಸಾಂಪ್ರದಾಯಿಕವಾಗಿ ತಮಗೆ ಬರುವ ಶೇ.20ರಷ್ಟು ಮತಬ್ಯಾಂಕ್ ಅನ್ನೇ ಮಾಯಾವತಿ ಅವಲಂಬಿಸಿದ್ದಾರೆ ಎಂದು ಬಿಎಸ್ಪಿ ಮೂಲಗಳು ತಿಳಿಸಿವೆ.