ಉತ್ತರಪ್ರದೇಶದ ಲಕ್ನೋದಲ್ಲಿ ಕೇಂದ್ರ ಸರ್ಕಾರವು ಮಾವಿನಹಣ್ಣಿನ ಮೆಗಾ ಕ್ಲಸ್ಟರ್ ಅನ್ನು ಅನುಮೋದಿಸಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೋದಲ್ಲಿ ‘ಉತ್ತರ ಪ್ರದೇಶ ಮಾವು ಮಹೋತ್ಸವ-2022’ ಉದ್ಘಾಟನೆಯ ನಂತರ ಸೋಮವಾರ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು , ಈ ಮೆಗಾ ಕ್ಲಸ್ಟರ್ ನಲ್ಲಿನ ಮಾವುಗಳನ್ನು ‘ಕಾಕೋರಿ ಬ್ರಾಂಡ್’ ಎಂದು ಕರೆಯಲಾಗುವುದು ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರವು ಲಕ್ನೋದಲ್ಲಿ ಮಾವಿನಹಣ್ಣಿನ ಮೆಗಾ ಕ್ಲಸ್ಟರ್ ಅನ್ನು ಅನುಮೋದಿಸಿದೆ, ಇದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ 100 ಕೋಟಿ ರೂ ಖರ್ಚು ಮಾಡಲಾಗುವುದು ಎಂದು ಆದಿತ್ಯನಾಥ್ ಹೇಳಿದರು.
ಇದು ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿ ಕಾಕೋರಿಯ ಮಹಾನ್ ವೀರರಿಗೆ ನಿಜವಾದ ಗೌರವವಾಗಿದೆ.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ತೋಟಗಾರಿಕೆ ಮತ್ತು ಆಹಾರ ಸಂಸ್ಕರಣಾ ಇಲಾಖೆಯ ಉಪಕ್ರಮದಲ್ಲಿ ಆಯೋಜಿಸಿದ್ದ ಮಾವು ಪ್ರದರ್ಶನಕ್ಕೆ ಭೇಟಿ ನೀಡಿದರು. ಅವರು ಲಕ್ನೋ ಮಾವು ಉತ್ಸವದ ಸ್ಮರಣಿಕೆ-2022 ಅನ್ನು ಬಿಡುಗಡೆ ಮಾಡಿದರು ಮತ್ತು ರಾಜ್ಯದ ಪ್ರಗತಿಪರ ರೈತರನ್ನು ಸನ್ಮಾನಿಸಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಿದ ಉತ್ತರ ಪ್ರದೇಶ ಮಾವು ಮಹೋತ್ಸವ ಜುಲೈ 7 ರಂದು ಮುಕ್ತಾಯಗೊಳ್ಳಲಿದೆ.
ವಿವಿಧ ಭಾಗಿದಾರರನ್ನು ಸಾಮಾನ್ಯ ವೇದಿಕೆಗೆ ಕರೆತರುವ ಮೂಲಕ ಮಾವಿನ ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಹಬ್ಬವನ್ನು ಆಯೋಜಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆ ತಂತ್ರಗಳ ಬಗ್ಗೆಯೂ ರೈತರಿಗೆ ಅರಿವು ಮೂಡಿಸಲಾಗುವುದು.