ವಸತಿ ರಹಿತರಿಗೆ ಸರ್ಕಾರದ ಸಿಹಿ ಸುದ್ಧಿ; 10 ಸಾವಿರ ಮನೆಗಳ ವಿತರಣೆ……
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 10 ಸಾವಿರಕ್ಕೂ ಹೆಚ್ಚು ಮನೆಗಳನ್ನು ಇದೇ ತಿಂಗಳ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 2360 ಮನೆಗಳು ಮತ್ತು ರಾಜ್ಯದ ವಿವಿಧೆಡೆ 7746 ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಲ್ಲಿ ಯಲಹಂಕ, ಗೋವಿಂದರಾಜ ನಗರ, ಮುದ್ದಯ್ಯನಪಾಳ್ಯ, ಆನೇಕಲ್, ಕೆ.ಆರ್.ಪುರದಲ್ಲಿನ ಮನೆಗಳ ಹಸ್ತಾಂತರ ಮಾಡಿದರೆ, ಶಹಾಪುರ, ಚಿತ್ತಾಪುರ, ಹುಬ್ಬಳ್ಳಿ, ಉಡುಪಿ, ಶಿರಾ, ಬಂಗಾರಪೇಟೆ, ಮಂಡ್ಯ ಸೇರಿದಂತೆ ಮೊದಲಾದ ಕಡೆಗಳಲ್ಲಿನ ಮನೆಗಳ ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ 5,24,426 ಮನೆಗಳನ್ನು ನಿರ್ಮಿಸಿ ಅರ್ಹರಿಗೆ ನೀಡಲಾಗುತ್ತಿದೆ. ಇದಕ್ಕಾಗಿ 8,381 ಕೋಟಿ ರು. ವೆಚ್ಚ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಐದು ಸಾವಿರ ಕೋಟಿ ರು.ಗಿಂತ ಹೆಚ್ಚು ಅನುದಾನ ನೀಡಿದ್ದು, ಎರಡು ಲಕ್ಷ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲಾಗಿದೆ. ಈ ತಿಂಗಳಾಂತ್ಯಕ್ಕೆ ಏಳು ಲಕ್ಷ ಫಲಾನುಭವಿಗಳನ್ನು ಗುರುತಿಸುವ ಕೆಲಸ ನಡೆಯಲಿದೆ. ಐದು ಸಾವಿರಕ್ಕೂ ಹೆಚ್ಚು ಎಕರೆ ಜಾಗವನ್ನು ಗುರುತಿಸಿ ಮನೆ ನಿರ್ಮಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
V Somanna : Government’s sweet news for the homeless; Distribution of 10 thousand houses…