ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷವಾದ ಸ್ಥಾನಮಾನವಿದೆ. ಅದರಲ್ಲಿಯೂ ಮುಕ್ಕೋಟಿ ಏಕಾದಶಿ ಅಥವಾ ವೈಕುಂಠ ಏಕಾದಶಿಯನ್ನು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ವರ್ಷದ ಕೊನೆಯ ಹಾಗೂ ಅತ್ಯಂತ ಪವಿತ್ರವಾದ ಈ ದಿನದಂದು ಸಾಕ್ಷಾತ್ ವೈಕುಂಠದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ. ಶ್ರೀಹರಿಯ ಕೃಪೆಗೆ ಪಾತ್ರರಾಗಲು ಮತ್ತು ಮೋಕ್ಷವನ್ನು ಪಡೆಯಲು ಭಕ್ತರು ಕಾತರದಿಂದ ಕಾಯುವ ದಿನವಿದು. ಈ ದಿನದಂದು ವ್ರತ ಆಚರಿಸಿ, ನಿಯಮಬದ್ಧವಾಗಿ ಪೂಜೆ ಸಲ್ಲಿಸಿದರೆ ಸಕಲ ಪಾಪಗಳು ಪರಿಹಾರವಾಗುತ್ತವೆ. ಹಾಗಾದರೆ ಈ ಬಾರಿಯ ವೈಕುಂಠ ಏಕಾದಶಿಯ ಪೂಜಾ ವಿಧಾನ, ಮುಹೂರ್ತ ಹಾಗೂ ನಿಯಮಗಳು ಹೇಗಿರಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ರಹ್ಮ ಮುಹೂರ್ತದಲ್ಲಿ ದಿನದ ಆರಂಭ
ಏಕಾದಶಿಯ ವ್ರತ ಆಚರಿಸುವವರು ಅಂದು ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿಯೇ ಏಳುವುದು ಕಡ್ಡಾಯ. ನಿತ್ಯಕರ್ಮಗಳನ್ನು ಮುಗಿಸಿ, ಶುದ್ಧವಾಗಿ ಸ್ನಾನ ಮಾಡಿದ ಬಳಿಕ ಹಳದಿ ಅಥವಾ ಬಿಳಿ ಬಣ್ಣದ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ವಿಷ್ಣುವಿಗೆ ಹಳದಿ ಬಣ್ಣ ಪ್ರಿಯವಾಗಿರುವುದರಿಂದ ಹಳದಿ ವಸ್ತ್ರ ಧಾರಣೆ ಶ್ರೇಷ್ಟ. ನಂತರ ಮನೆಯನ್ನು ಶುದ್ಧೀಕರಿಸಿ, ಗಂಗಾಜಲ ಅಥವಾ ಪವಿತ್ರವಾದ ತುಳಸಿ ತೀರ್ಥವನ್ನು ಮನೆಯ ಸುತ್ತಲೂ ಮತ್ತು ಮನೆಯ ಒಳಗೂ ಪ್ರೋಕ್ಷಣೆ ಮಾಡಬೇಕು. ಮನೆಯ ಮುಖ್ಯ ದ್ವಾರವನ್ನು ವೈಕುಂಠ ದ್ವಾರವನ್ನಾಗಿ ಭಾವಿಸಿ ಹೂವು ಹಾಗೂ ತೋರಣಗಳಿಂದ ವಿಶೇಷವಾಗಿ ಅಲಂಕರಿಸಬೇಕು.
ಪೂಜಾ ವಿಧಾನ ಮತ್ತು ಸಂಕಲ್ಪ
ಈ ಬಾರಿ ವೈಕುಂಠ ಏಕಾದಶಿಯು ಬೆಳಿಗ್ಗೆ 7:50 ರಿಂದ ಪ್ರಾರಂಭವಾಗಿ ಡಿಸೆಂಬರ್ 31 ರ ಬೆಳಿಗ್ಗೆ 5 ಗಂಟೆಯವರೆಗೆ ಇರುತ್ತದೆ. ಈ ಅವಧಿಯಲ್ಲಿ ವ್ರತ ಆಚರಿಸುವುದು ಉತ್ತಮ ಫಲ ನೀಡುತ್ತದೆ.
ಪೂಜೆಯನ್ನು ಆರಂಭಿಸುವ ಮುನ್ನ, ದೇವರ ಕೋಣೆಯಲ್ಲಿ ಶುದ್ಧವಾದ ಪೀಠದ ಮೇಲೆ ಶ್ರೀವಿಷ್ಣುವಿನ ವಿಗ್ರಹ ಅಥವಾ ಫೋಟೋವನ್ನು ಇರಿಸಬೇಕು. ದೇವರ ಮುಂದೆ ಎರಡು ದೀಪಗಳನ್ನು ಬೆಳಗಿಸಿ, ಕಳಶವನ್ನು ಪ್ರತಿಷ್ಠಾಪನೆ ಮಾಡಬೇಕು. ವಿಷ್ಣುವಿನ ಆರಾಧನೆಗೆ ಶಂಖ ಹಾಗೂ ಚಕ್ರಗಳು ಅತ್ಯಗತ್ಯವಾಗಿದ್ದು, ಅವುಗಳನ್ನು ದೇವರ ಸನ್ನಿಧಿಯಲ್ಲಿ ಇರಿಸಬೇಕು. ಬಳಿಕ ಕೈಯಲ್ಲಿ ಅಕ್ಷತೆ, ನೀರು ಹಿಡಿದು ಈ ದಿನ ಸಂಪೂರ್ಣ ಉಪವಾಸವಿದ್ದು, ಶ್ರದ್ಧೆಯಿಂದ ವ್ರತ ಆಚರಿಸುವುದಾಗಿ ಸಂಕಲ್ಪ ಮಾಡಬೇಕು. ದೇವರಿಗೆ ಪ್ರಿಯವಾದ ಹಳದಿ ಬಣ್ಣದ ಹೂವುಗಳು ಮತ್ತು ತುಳಸಿ ಮಾಲೆಯನ್ನು ಅರ್ಪಿಸಬೇಕು.
ವಿಶೇಷ ನೈವೇದ್ಯ ಮತ್ತು ತುಳಸಿ ಮಹತ್ವ
ಶ್ರೀಹರಿಯ ಪೂಜೆಯಲ್ಲಿ ತುಳಸಿಗೆ ಅಗ್ರಸ್ಥಾನ. ತುಳಸಿ ದಳ ಇಲ್ಲದೆ ವಿಷ್ಣುವಿನ ಪೂಜೆ ಅಥವಾ ನೈವೇದ್ಯ ಪೂರ್ಣವಾಗುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ನೈವೇದ್ಯಕ್ಕಾಗಿ ಬಾಳೆಹಣ್ಣು, ಅಕ್ಕಿ ಪಾಯಸ, ಕಡಲೆ ಹಾಗೂ ಬೆಲ್ಲವನ್ನು ಇಡುವುದು ಶ್ರೇಷ್ಠ. ನೈವೇದ್ಯದ ಪದಾರ್ಥಗಳ ಮೇಲೆ ಮತ್ತು ಪೂಜೆಗೆ ಬಳಸುವ ನೀರಿನಲ್ಲಿ ತುಳಸಿಯ 12 ದಳಗಳನ್ನು ಹಾಕುವುದು ಕಡ್ಡಾಯ. ಪೂಜೆ ಮುಗಿದ ನಂತರ ಬೆಲ್ಲದ ನೀರು ಹಾಗೂ ತುಳಸಿ ತೀರ್ಥವನ್ನು ಪ್ರಸಾದವಾಗಿ ಸ್ವೀಕರಿಸಬೇಕು ಹಾಗೂ ಮನೆಗೆ ಬಂದವರಿಗೂ ನೀಡಬೇಕು.
ದೋಷ ನಿವಾರಣೆಗೆ ಸರಳ ಪರಿಹಾರಗಳು
ವೈಕುಂಠ ಏಕಾದಶಿಯಂದು ಪೂಜೆ ಮಾಡುವುದರಿಂದ ಕೇವಲ ಮೋಕ್ಷ ಮಾತ್ರವಲ್ಲದೆ, ಸಾಂಸಾರಿಕ ದೋಷಗಳೂ ಪರಿಹಾರವಾಗುತ್ತವೆ. ಈ ದಿನದ ಪೂಜೆಯಿಂದ ಗೃಹದೋಷ, ಪಿತೃ ದೋಷ ಹಾಗೂ ಮಂತ್ರ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ವಾಸ್ತು ದೋಷ ನಿವಾರಣೆಗಾಗಿ ಒಂದು ವಿಶೇಷ ಪರಿಹಾರವಿದೆ. ಅದೇನೆಂದರೆ, ಏಕಾದಶಿಯ ದಿನ ತಾಮ್ರದ ಬಿಂದಿಗೆಯಲ್ಲಿ ನೀರನ್ನು ತೆಗೆದುಕೊಂಡು, ಓಂ ನಮೋ ನಾರಾಯಣಾಯ ಎಂಬ ಮಂತ್ರವನ್ನು ಪಠಿಸುತ್ತಾ ತುಳಸಿ ಗಿಡಕ್ಕೆ ಅರ್ಪಿಸಿದರೆ ವಾಸ್ತು ದೋಷಗಳು ತೊಲಗುತ್ತವೆ.
ಅಲ್ಲದೆ, ಅಂದು ಬೆಳಗಿನ ಜಾವ 4:30ಕ್ಕೆ ಎದ್ದು, ಮನೆಯ ಮುಖ್ಯ ದ್ವಾರವನ್ನು ಅಲಂಕರಿಸಿ ಅಲ್ಲಿ ದೀಪವನ್ನು ಹಚ್ಚುವುದರಿಂದ ವೈಕುಂಠಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಹಾಗೂ ಮನೆಯಲ್ಲಿ ದೈವಿಕ ಶಕ್ತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
ಜಪಿಸಬೇಕಾದ ಶಕ್ತಿಶಾಲಿ ಮಂತ್ರಗಳು
ಈ ದಿನದಂದು ಮೌನವಾಗಿ ಧ್ಯಾನ ಮಾಡುತ್ತಾ ಅಥವಾ ಭಜನೆ ಮಾಡುತ್ತಾ ದೇವರ ನಾಮಸ್ಮರಣೆ ಮಾಡುವುದು ಬಹಳ ಮುಖ್ಯ. ವಿಷ್ಣು ಸಹಸ್ರನಾಮ ಮತ್ತು ಗೋವಿಂದ ನಾಮಾವಳಿಯನ್ನು ಪಠಿಸಬೇಕು. ತುಳಸಿ ಗಿಡದ ಹತ್ತಿರ ಕುಳಿತು ಧ್ಯಾನ ಮಾಡುತ್ತಾ ಓಂ ನಮೋ ನಾರಾಯಣಾಯ ಮತ್ತು ಓಂ ಶ್ರೀವಿಷ್ಣುವೇ ನಮಃ ಎಂಬ ಮಂತ್ರಗಳನ್ನು ಭಕ್ತಿಯಿಂದ 108 ಬಾರಿ ಪಠಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಹಾಗೂ ಶುಭಫಲ ದೊರೆಯುತ್ತದೆ.
ವೈಕುಂಠ ಏಕಾದಶಿಯು ಕೇವಲ ಒಂದು ಆಚರಣೆಯಲ್ಲ, ಅದು ಆತ್ಮಶುದ್ಧಿಯ ಮಾರ್ಗ. ಯಾರು ಈ ದಿನ ನಿಷ್ಠೆಯಿಂದ ಉಪವಾಸವಿದ್ದು ಶ್ರೀಹರಿಯನ್ನು ಆರಾಧಿಸುತ್ತಾರೋ, ಅವರಿಗೆ ಜೀವನದಲ್ಲಿ ನೆಮ್ಮದಿ ಹಾಗೂ ಅಂತ್ಯದಲ್ಲಿ ಮೋಕ್ಷ ಖಚಿತ ಎಂಬುದು ಪುರಾಣಗಳ ಮಾತು.








