ಜಾಮ್ನಗರ (ಭಾರತ), ಸೆಪ್ಟೆಂಬರ್ 04, 2026: ರಿಲಯನ್ಸ್ ಇಂಡಸ್ಟ್ರೀಸ್ ಆರಂಭಿಸಿರುವ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾಗಿರುವ ವಂತಾರಾ ಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ಘೋಷಿಸಲಾಗಿದ್ದು, ಕರ್ನಾಟಕದ ನಿವೃತ್ತ ಐಎಫ್ಎಸ್ ಅಧಿಕಾರಿ ಸುಭಾಷ್ ಮಲ್ಕೇಡೆ ಸೇರಿದಂತೆ ಐವರು ಸದಸ್ಯರಾಗಿ ನೇಮಕವಾಗಿದ್ದಾರೆ.
ಈ ಮಂಡಳಿಯು ವಂತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಅನುಸರಣಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ವನ್ಯಜೀವಿಗಳನ್ನು ಆಮದು ಮಾಡಿಕೊಳ್ಳುವ ಭವಿಷ್ಯದ ಅರ್ಜಿಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಮುಂದಿನ ಐದು ವರ್ಷಗಳು ಹಾಗೂ ಅದರಾಚೆಗಿನ ವಂತಾರಾದ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
ಸುಭಾಷ್ ಕೆ. ಮಲ್ಕೇಡೆಯವರು ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ನಿವೃತ್ತ ಹಿರಿಯ ಅಧಿಕಾರಿ ಹಾಗೂ ಕರ್ನಾಟಕದ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆಗಿದ್ದಾರೆ. ಇವರು ವನ್ಯಜೀವಿ ಸಂರಕ್ಷಣೆ, ಸಂರಕ್ಷಿತ ಪ್ರದೇಶಗಳು, ಅಳಿವಿನಂಚಿನಲ್ಲಿರುವ ಜಾತಿಗಳ ನಿರ್ವಹಣೆ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಮತ್ತು ಕಾನೂನು ಜಾರಿಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇತರ ಸದಸ್ಯರಾಗಿ ನ್ಯಾಯಮೂರ್ತಿ ಕೃಷ್ಣ ಮುರಾರಿ, ಕ್ರೇಗ್ ಹೂವರ್, ಗ್ರೆಟಾ ಎಫ್. ಲೋರಿ, ಡಾ. ಕುಶಾಲ್ ಕನ್ವಾರ್ ಶರ್ಮಾ ನೇಮಕವಾಗಿದ್ದಾರೆ. ಸ್ವತಂತ್ರ ಅಧ್ಯಕ್ಷರಾಗಿ ಜಾನ್ ಇ. ಸ್ಕ್ಯಾನ್ಲಾನ್ ಎಒ ನೇಮಕವಾಗಿದ್ದಾರೆ.
ಆಡಳಿತ ಮಂಡಳಿಯ ಅಧ್ಯಕ್ಷರಾದ ಜಾನ್ ಸ್ಕ್ಯಾನ್ಲಾನ್ ಮಾತನಾಡಿ: “ವಂತಾರಾದ ಭವಿಷ್ಯದ ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ಇತ್ತೀಚೆಗೆ ಘೋಷಿಸಲಾದ ಬದಲಾವಣೆಗಳನ್ನು ದೈನಂದಿನ ಕಾರ್ಯಾಚರಣೆಗಳಲ್ಲಿ ಅಳವಡಿಸಿಕೊಳ್ಳುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಪ್ರಮುಖ ಪಾತ್ರ ವಹಿಸುತ್ತದೆ ” ಎಂದರು.
ವಂತಾರಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ವಿವಾನ್ ಕರಾಣಿ ಮಾತನಾಡಿ : “ ವಂತಾರಾದಲ್ಲಿ ವೈಜ್ಞಾನಿಕವಾಗಿ ವನ್ಯಜೀವಿ ಸಂರಕ್ಷಣೆಯನ್ನು ನಾವು ಮುನ್ನಡೆಸುತ್ತಿದ್ದೇವೆ. ಆದ್ದರಿಂದ ವಂತಾರಾದ ಚಟುವಟಿಕೆಗಳನ್ನು ಉನ್ನತ ದರ್ಜೆಯಲ್ಲಿ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಆಡಳಿತ ಮಂಡಳಿಯ ಸದಸ್ಯರನ್ನು ನಾನು ಸ್ವಾಗತಿಸುತ್ತೇನೆ ” ಎಂದರು. ಆಡಳಿತ ಮಂಡಳಿಯು ವಂತಾರಾದ ಉನ್ನತ ಆಡಳಿತ ಮಂಡಳಿಯಾಗಿದೆ. ಇದು ವಂತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳು, ಭಾರತೀಯ ಕಾನೂನು, ಸಿಐಟಿಇಎಸ್ ಮತ್ತು ಇತರ ಅಂತರರಾಷ್ಟ್ರೀಯ ಒಪ್ಪಂದಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವ ಒಟ್ಟು ಜವಾಬ್ದಾರಿಯನ್ನು ಹೊಂದಿದೆ.








