ಬೋಲ್ಡ್ ಹೇಳಿಕಗಳ ಮೂಲಕ ಸದಾ ಸುದ್ದಿಯಲ್ಲಿರೋ ನಟಿ ವರಲಕ್ಷ್ಮಿ ಶರತ್ ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಮಾಣಿಕ್ಯ, ರನ್ನ ವಿಸ್ಮಯ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಾಭಿಮಾನಿಗಳ ಮನಗೆದ್ದಿರುವ ನಟಿ ವರಲಕ್ಷ್ಮಿ, ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಏತನ್ಮಧ್ಯೆ ಮಾಣಿಕ್ಯ ಸುಂದರಿ ಹಸೆಮಣೆ ಏರಲು ನಿರ್ಧರಿಸಿದ್ದು, ಚಿತ್ರರಂಗ ತೊರೆಯಲಿದ್ದಾರೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ.
ಉದ್ಯಮಿ ಜೊತೆ ವರಲಕ್ಷ್ಮಿ ವಿವಾಹ
ಸೋಷಿಯಲ್ ಮೀಡಿಯಾದಲ್ಲಿ ನಟಿ ವರಲಕ್ಷ್ಮಿ ಶರತ್ ಕುಮಾರ್ ಮದುವೆ ಆಗುತ್ತಿದ್ದಾರೆ. ಅವರು ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲೂ ವರಲಕ್ಷ್ಮಿ ಅವರು ಭಾರತೀಯ ಕ್ರಿಕೆಟ್ ತಂಡದ ಜೊತೆ ಸಂಬಂಧ ಹೊಂದಿರುವ ಉದ್ಯಮಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಇಬ್ಬರು ಮದುವೆಯಾಗಲಿದ್ದಾರೆ. ಈಗ ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಲಾಕ್ ಡೌನ್ ಬಳಿಕ ವರಲಕ್ಷ್ಮಿ ಅವರು ವಿವಾಹವಾಗಲಿದ್ದಾರೆ. ಅದಕ್ಕಾಗಿ ಅವರು ಮನೆಯಲ್ಲಿಯೇ ಇದ್ದು ಮದುವೆ ತಯಾರಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವರಲಕ್ಷ್ಮಿ ಬುಸ್ ಬುಸ್
ತಮ್ಮ ಮದುವೆ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ವರಲಕ್ಷ್ಮಿ ಬುಸುಗುಟ್ಟಿದ್ದು, “ನನ್ನ ಮದುವೆ ಸುದ್ದಿ ನನಗೆ ಯಾಕೆ ಕೊನೆಗೆ ಗೊತ್ತಾಗುತ್ತೆ. ನಾನ್ ಸೆನ್ಸ್ ವದಂತಿಗಳು ಇವು. ಯಾಕೆ ಎಲ್ಲರಿಗೂ ನನ್ನ ಮದುವೆ ಬಗ್ಗೆ ಅಷ್ಟು ಆಸಕ್ತಿ. ನಾನು ಒಂದು ವೇಳೆ ಮದುವೆ ಆಗುವುದೇ ಆದರೆ ಎಲ್ಲರಿಗೂ ಗೊತ್ತಾಗುವ ಹಾಗೆ ಕೂಗಿ ಹೇಳುತ್ತೇನೆ. ಇದರ ಬಗ್ಗೆ ಬರೆಯುತ್ತಿರುವ ಮೀಡಿಯಾದವರಿಗೆ ಹೇಳುವುದೇನಂದರೆ ನಾನು ಮದುವೆ ಆಗುತ್ತಿಲ್ಲ, ಸಿನಿಮಾನೂ ಬಿಡ್ತಾ ಇಲ್ಲ” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ವರಲಕ್ಷ್ಮಿ ಅವರ ಕೈಯಲ್ಲಿ ಕನ್ನಡ ಸಿನಿಮಾ ಸೇರಿದಂತೆ ಸುಮಾರು 10 ಸಿನಿಮಾಗಳಿವೆ. ಕನ್ನಡದಲ್ಲಿ ಸದ್ಯ ರಣಂ ಸಿನಿಮಾದಲ್ಲಿ ವರಲಕ್ಷ್ಮಿ ಅಭಿನಯಿಸುತ್ತಿದ್ದಾರೆ.








