ಜಿಲ್ಲಾ ನ್ಯಾಯಾಲಯದಿಂದ ಇಂದು ಜ್ಞಾನವ್ಯಾಪಿ ತೀರ್ಪು – ಸೆಕ್ಷನ್ 144 ಜಾರಿ
ಜ್ಞಾನವ್ಯಾಪಿ ಮಸೀದಿ ಮತ್ತು ಶೃಂಗಾರ್ ಗೌರಿ ಪ್ರಕರಣದ ಅರ್ಜಿ ವಿಚಾರಣೆಯನ್ನ ನಡೆಸಿದ್ದ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಇಂದು ಆದೇಶ ಹೊರಡಿಸಿವ ನಿರೀಕ್ಷೆ ಇದೆ. ನ್ಯಾಯಾಲಯದ ಆದೇಶಕ್ಕೂ ಮುನ್ನ ವಾರಣಾಸಿಯಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕಳೆದ ತಿಂಗಳು 24 ರಂದು ವಿಚಾರಣೆ ಪೂರ್ಣಗೊಂಡ ನಂತರ ಆದೇಶವನ್ನು ಕಾಯ್ದಿರಿಸಿದ್ದರು. ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರು ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿದ್ದಾರೆ.
ವಾರಣಾಸಿ ಕಮಿಷನರೇಟ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮತ್ತು ಶಾಂತಿ ಕಾಪಾಡಲು ಆಯಾ ಪ್ರದೇಶಗಳಲ್ಲಿನ ಧಾರ್ಮಿಕ ಮುಖಂಡರೊಂದಿಗೆ ಸಂವಾದ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಎ ಸತೀಶ್ ಗಣೇಶ್ ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಡೀ ನಗರವನ್ನು ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದ್ದು, ಅವರ ಅಗತ್ಯಕ್ಕೆ ಅನುಗುಣವಾಗಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ಮತ್ತು ಪಾದಯಾತ್ರೆಗೆ ನಿರ್ದೇಶನಗಳನ್ನು ಸಹ ಹೊರಡಿಸಲಾಗಿದೆ. ಜಿಲ್ಲೆಯ ಗಡಿ ಪ್ರದೇಶಗಳು, ಹೋಟೆಲ್‌ಗಳು, ಅತಿಥಿ ಗೃಹಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಲಾಗಿದೆ.
ಜ್ಞಾನವಾಪಿ ಮಸೀದಿಯ ಹೊರಗೋಡೆಯ ಮೇಲೆ ವಿಗ್ರಹಗಳಿರುವ ಹಿಂದೂ ದೇವತೆಗಳ ದೈನಂದಿನ ಪೂಜೆಗೆ ಅನುಮತಿ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು.








